ನವದೆಹಲಿ: ಸೇನೆಯಲ್ಲಿ ಶೌರ್ಯ ಪ್ರಶಸ್ತಿ ಪುರಸ್ಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ಇಲ್ಲದ ಕಾರಣ ಇದನ್ನು 'ನಿರಂಕುಶ ವ್ಯವಸ್ಥೆ' ಎಂದು ಘೋಷಿಸಲು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಅರ್ಜಿಯು ಮುಂದಿನ ವಾರ ವಿಚಾರಣೆಗೆ ಬರುವ ಸಂಭವವಿದೆ. ಅರ್ಹರಿಗೂ ಶೌರ್ಯ ಪ್ರಶಸ್ತಿಯನ್ನು ನಿರಾಕರಿಸಲಾಗಿರುವ ಅನೇಕ ನಿದರ್ಶನಗಳಿವೆ. ಸಮರ್ಪಕ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಯ ಅನುಪಸ್ಥಿತಿಯಲ್ಲಿ ಸೇನಾ ಪಡೆಯ ಅರ್ಹರಿಗೆ ಅನ್ಯಾಯವಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಸೇನೆಯ ನಿವೃತ್ತ ಸಿಬ್ಬಂದಿಯೊಬ್ಬರು ಅರ್ಜಿ ಸಲ್ಲಿಸಿದ್ದು, ಶೌರ್ಯ ಪ್ರಶಸ್ತಿಯನ್ನು ಸಾಮಾನ್ಯವಾಗಿ ಯುದ್ಧಕಾಲದಲ್ಲಿ ತೋರಿದ ಸಾಹಸ, ಶೌರ್ಯಕ್ಕಾಗಿ ನೀಡಲಾಗುತ್ತದೆ. ಈಗಿನ ಆಯ್ಕೆ ಪ್ರಕ್ರಿಯೆಯು ಅಸಾಂವಿಧಾನಕ ಕ್ರಮದ್ದಾಗಿದೆ. ತಪ್ಪು ಆಯ್ಕೆಯ ಸಂದರ್ಭದಲ್ಲಿ ಪ್ರಶ್ನಿಸಲೂ ಈಗ ಯಾವುದೇ ಅವಕಾಶವಿಲ್ಲ ಎಂದು ಪ್ರತಿಪಾದಿಸಿದ್ದಾರೆ.