ನವದೆಹಲಿ: ಭಾರತದಂತಹ ರಾಷ್ಟ್ರದಲ್ಲಿ ಬಲವಂತದ ಧಾರ್ಮಿಕ ಮತಾಂತರಗಳು ಯಾವುದೇ ಧರ್ಮ ಪ್ರಸಾರದ ಅಳತೆಗೋಲು ಆಗುವುದಿಲ್ಲ. ದೇಶದಲ್ಲಿ ಆಸ್ತಿಕರು ಮತ್ತು ನಾಸ್ತಿಕರು ಸಮಾನ ಹಕ್ಕುಗಳೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮಂಗಳವಾರ ಹೇಳಿದರು.
ದೇಶದ ವಿವಿಧ ಭಾಗಗಳಿಗೆ ಸೇರಿದ ಕ್ರಿಶ್ಚಿಯನ್ ಸಮುದಾಯದ ಪ್ರಮುಖರೊಂದಿಗೆ ನಡೆಸಿದ ಸಂವಾದದಲ್ಲಿ ಮಾತನಾಡಿದ ನಖ್ವಿ, ಭಾರತವು ಎಂದಿಗೂ ಧಾರ್ಮಿಕ ಮತಾಂಧತೆ ಮತ್ತು ಅಸಹಿಷ್ಣುತೆಗೆ ಬಲಿಯಾಗುವುದಿಲ್ಲ. ನಮ್ಮ ದೇಶ ವಿಶ್ವದ ಅತಿದೊಡ್ಡ ಅಧ್ಯಾತ್ಮಿಕ- ಧಾರ್ಮಿಕ ಜ್ಞಾನದ ಕೇಂದ್ರವಾಗಿದೆ. ಅಲ್ಲದೇ 'ಸರ್ವ ಧರ್ಮ ಸಮಾ ಭಾವ' (ಎಲ್ಲಾ ಧರ್ಮಗಳಿಗೂ ಸಮಾನ ಗೌರವ) ಮತ್ತು 'ವಸುಧೈವ ಕುಟುಂಬಕಂ'(ಇಡೀ ವಿಶ್ವ ಒಂದೇ ಕುಟುಂಬ) ಸ್ಫೂರ್ತಿಯ ಧಾಮವಾಗಿದೆ ಎಂದರು.
ಪ್ರಪಂಚದ ಬಹುತೇಕ ಎಲ್ಲಾ ಧರ್ಮಗಳ ಅನುಯಾಯಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ. ವಿವಿಧ ಧರ್ಮಗಳ ಹಬ್ಬಗಳು ಮತ್ತು ಸಂಭ್ರಮಗಳನ್ನು ಒಟ್ಟಿಗೆ ಆಚರಿಸುವ ವಿಶ್ವದ ಏಕೈಕ ದೇಶ ನಮ್ಮದು. ನಾವು ಈ ಸಾಂಸ್ಕೃತಿಕ ಪರಂಪರೆ ಮತ್ತು ಸಹಬಾಳ್ವೆಯ ಪರಂಪರೆಯನ್ನು ಬಲಪಡಿಸಬೇಕು. ಈ ಏಕತೆ ಮತ್ತು ಸಾಮರಸ್ಯವನ್ನು ಭಂಗಗೊಳಿಸುವ ಯಾವುದೇ ಪ್ರಯತ್ನವು ರಾಷ್ಟ್ರದ ಆತ್ಮವನ್ನು ಘಾಸಿಗೊಳಿಸುತ್ತದೆ. ದೇಶದ ಸಹಿಷ್ಣುತೆ ಮತ್ತು ಸಹಬಾಳ್ವೆ ಬದ್ಧತೆಯನ್ನು ಯಾವುದೇ ಸಂದರ್ಭದಲ್ಲೂ ದುರ್ಬಲಗೊಳಿಸಲು ಅವಕಾಶ ನೀಡದಂತೆ ನೋಡಿಕೊಳ್ಳುವುದು ನಮ್ಮ ಸಾಮೂಹಿಕ ರಾಷ್ಟ್ರೀಯ ಜವಾಬ್ದಾರಿ ಎಂದು ನಖ್ವಿ ಪ್ರತಿಪಾದಿಸಿದರು.