ಪ್ರಯಾಗ್ ರಾಜ್: ಆಘಾತಕಾರಿ ಘಟನೆಯೊಂದರಲ್ಲಿ, ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷ ಆಚಾರ್ಯ ನರೇಂದ್ರ ಗಿರಿ ಅವರು ಸೋಮವಾರ ನಿಗೂಢವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗರಾಜ್‌ನ ಬಘಂಬರಿ ಮಠದಲ್ಲಿ ಮಹಾಂತ ನರೇಂದ್ರ ಗಿರಿ ಅವರ ಶವ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಅವರ ಸಾವಿಗೆ ನಿಖರ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಪ್ರಸ್ತುತ ಘಟನಾ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸ್ ವರಿಷ್ಠಾಧಿಕಾರಿಗಳು ತನಿಖೆ ನಡೆಸಿದ್ದಾರೆ.
ಮಹಾಂತ ನರೇಂದ್ರ ಗಿರಿ ಅವರ ನಿಧನಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಅವರು ಸಂತಾಪ ಸೂಚಿಸಿದ್ದು, 'ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಾಂತ್ ನರೇಂದ್ರ ಗಿರಿ ಅವರ ಸಾವು ಆಧ್ಯಾತ್ಮಿಕ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಅಗಲಿದ ಅವರ ಆತ್ಮಕ್ಕೆ ಅವರ ಪಾದದಲ್ಲಿ ಸ್ಥಾನ ಮತ್ತು ಶಕ್ತಿಯನ್ನು ನೀಡಬೇಕೆಂದು ಭಗವಾನ್ ಶ್ರೀರಾಮನನ್ನು ಪ್ರಾರ್ಥಿಸುತ್ತೇನೆ. ಅವರ ಅಗಲಿಕೆ ದುಃಖವನ್ನು ಸಹಿಸಿಕೊಳ್ಳಲು ಅವರ ಅನುಯಾಯಿಗಳಿಗೆ ಆ ದೇವರು ಶಕ್ತಿ ನೀಡಲಿ ಎಂದು ಹೇಳಿದ್ದಾರೆ.
ಸೂಕ್ತ ತನಿಖೆಗೆ ಭಕ್ತರಿಂದ ಆಗ್ರಹ
ಇನ್ನು ನರೇಂದ್ರ ಗಿರಿ ಅವರ ನಿಧನದ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿ ಅವರ ಬೆಂಬಲಿಗರು ಮತ್ತು ಭಕ್ತರು ಆಗ್ರಹಿಸಿದ್ದಾರೆ. ಮಹಾಂತ ನರೇಂದ್ರ ಗಿರಿ ಅವರು ಪ್ರಭಾವಿ ವ್ಯಕ್ತಿಯಾಗಿದ್ದರಿಂದ ಅವರ ಸಾವು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.