ನವದೆಹಲಿ: ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗಾಗಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ)2021ರ ಪರೀಕ್ಷಾ ಮಾದರಿಯಲ್ಲಿ ಕೊನೆಯ ಕ್ಷಣದ ಬದಲಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಯುವ ವೈದ್ಯರನ್ನು ನಿಮ್ಮ ಅಧಿಕಾರದ ಆಟದಲ್ಲಿ ಫುಟ್‌ಬಾಲ್‌ನಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇಂದ್ರಕ್ಕೆ ಹೇಳಿದೆ.
'ಒಂದು ಸಭೆಯನ್ನು ನಡೆಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ' ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಬಿ ವಿ ನಾಗರತ್ನ ಅವರ ಪೀಠವು ರಾಷ್ಟ್ರೀಯ ವೈದ್ಯಕೀಯ ಮಂಡಳಿ ಮತ್ತು ಇತರ ಅಧಿಕಾರಿಗಳಿಗೆ ಸೂಚಿಸಿದೆ.
ಪ್ರತೀಕ್ ರಸ್ತೋಗಿ ಮತ್ತು ಇತರ 40 ಸ್ನಾತಕೋತ್ತರ ಪದವೀಧರ ವೈದ್ಯರು ಸಲ್ಲಿಸಿದ ಮನವಿಯನ್ನು ಕೈಗೆತ್ತಿಕೊಂಡ ನ್ಯಾಯಪೀಠವು, 'ವಿದ್ಯಾರ್ಥಿಗಳು ಸೂಪರ್ ಸ್ಪೆಷಾಲಿಟಿ ಕೋರ್ಸ್‌ಗಳಿಗೆ ಹಲವು ತಿಂಗಳು ಮುಂಚಿತವಾಗಿ ತಯಾರಿ ಆರಂಭಿಸುತ್ತಾರೆ. ಪರೀಕ್ಷೆಗೆ ಮುನ್ನ ಕೊನೇ ಕ್ಷಣದ ಬದಲಾವಣೆಯ ಅಗತ್ಯವೇನು? ಮುಂದಿನ ವರ್ಷ ಬದಲಾವಣೆಗಳೊಂದಿಗೆ ನೀವು ಏಕೆ ಮುಂದುವರಿಯಲು ಸಾಧ್ಯವಿಲ್ಲ? ' ಎಂದು ನ್ಯಾಯಾಲಯ ಪ್ರಶ್ನಿಸಿದೆ.
'ಅಧಿಕಾರವಿದೆ ಎಂಬ ಕಾರಣಕ್ಕೆ ಅವರು ಹೇಗೆಂದರೆ ಹಾಗೆ ಚಲಾಯಿಸಲು ಬರುವುದಿಲ್ಲ' ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ ಪರ ಹಾಜರಾದ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರಿಗೆ ಪೀಠ ಹೇಳಿದೆ.
'ಈ ಯುವ ವೈದ್ಯರನ್ನು ಅಧಿಕಾರದ ಆಟದಲ್ಲಿ ಫುಟ್‌ಬಾಲ್‌ಗಳಂತೆ ಪರಿಗಣಿಸಬೇಡಿ ... ಇದು (ಪರೀಕ್ಷೆ) ಅವರ ವೃತ್ತಿಜೀವನಕ್ಕೆ ಬಹಳ ಮುಖ್ಯವಾಗಿದೆ. ಈಗ ನೀವು ಕೊನೆಯ ಕ್ಷಣದ ಬದಲಾವಣೆಗಳನ್ನು ಮಾಡಲು ಸಾಧ್ಯವಿಲ್ಲ. ಬದಲಾವಣೆಯ ಕಾರಣದಿಂದಾಗಿ ಈ ಯುವ ವೈದ್ಯರು ಗೊಂದಲಕ್ಕೆ ಒಳಗಾಗಬಹುದು' ಎಂದು ಪೀಠ ಹೇಳಿದೆ.
ಯುವ ವೈದ್ಯರ ಜೊತೆ ಪ್ರಜ್ಞಾಪೂರ್ವಕವಾಗಿ ವ್ಯವಹರಿಸುವಂತೆ ನ್ಯಾಯಾಲಯವು ಅಧಿಕಾರಿಗಳಿಗೆ ತಿಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮುಂದಿನ ವಾರ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತೆ ನ್ಯಾಯಾಲಯವು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿಗೆ ಆದೇಶಿಸಿದೆ.