ನವದೆಹಲಿ: ಲೋಕಸಭೆಯ ಉಪಸಭಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಸಾಂವಿಧಾನಿಕ ಹುದ್ದೆಯಲ್ಲಿ ರುವವರ ನಿಷ್ಕ್ರಿಯತೆ ತೋರುತ್ತಿದ್ದಾರೆಂದು ಆರೋಪಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕುರಿತಂತೆ ತನ್ನ ನಿಲುವು ತಿಳಿಸಲು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಸಮಯಾವಕಾಶ ನೀಡಿದೆ.
'ಈ ಪಿಐಎಲ್ ಕುರಿತು ಕೇಂದ್ರಕ್ಕೆ ನೋಟಿಸ್ ನೀಡುತ್ತಿಲ್ಲ. ಸೂಚನೆಗಳನ್ನು ನೀಡುತ್ತಿದ್ದೇವೆ. ಅದನ್ನು ತೆಗೆದುಕೊಳ್ಳಿ' ಎಂದು ಮುಖ್ಯ ನ್ಯಾಯಮೂರ್ತಿ ಡಿ.ಎನ್.ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರನ್ನೊಳಗೊಂಡ ಪೀಠ ಕೇಂದ್ರಸರ್ಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಚೇತನ್ ಶರ್ಮಾ ಅವರಿಗೆ ತಿಳಿಸಿತು.
ಲೋಕಸಭಾ ಉಪಸಭಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲು ಹತ್ತಿರದಲ್ಲೇ ಯಾವುದಾದರೂ ದಿನಾಂಕವನ್ನು ಸೂಚಿಸಲು ಲೋಕಸಭಾ ಅಧ್ಯಕ್ಷರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಪಿಐಎಲ್ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಸೂಚನೆ ನೀಡಿತು. ನಂತರ ಅರ್ಜಿ ವಿಚಾರಣೆಯನ್ನು ನ್ಯಾಯಪೀಠ ಸೆ. 30ಕ್ಕೆ ಮುಂದೂಡಿತು.
ಅರ್ಜಿದಾರ ಪವನ್ ರೆಲೆ ಅವರು, 'ಲೋಕಸಭೆಯ ಉಪಸಭಾಧ್ಯಕ್ಷರ ಸ್ಥಾನ ಕಳೆದ ಎರಡು ವರ್ಷಗಳಿಂದ ಖಾಲಿ ಇದೆ. ಇದು ಸಂವಿಧಾನದ ಪರಿಚ್ಛೇದ 93ರ ಉಲ್ಲಂಘನೆ' ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು. 'ಉಪ ಸಭಾಧ್ಯಕ್ಷರ ಆಯ್ಕೆಯಾಗದೇ 830 ದಿನಗಳು ಕಳೆದಿವೆ. ಇದು ತುಂಬಾ ಗಂಭೀರವಾದ ವಿಷಯ' ಎಂದು ಅರ್ಜಿಯಲ್ಲಿ ತಿಳಿಸಿದ್ದರು.