ತಿರುವನಂತಪುರ: ರಾಜ್ಯದ ಮುಂದುವರಿದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಲು ಕೇರಳ ಸರ್ಕಾರವು ಶೀಘ್ರದಲ್ಲಿಯೇ ಸಾಮಾಜಿಕ-ಆರ್ಥಿಕ ಸಮೀಕ್ಷೆ ನಡೆಸಲಿದೆ. ಇದು ಆ ಸಮುದಾಯದ ಬಹುದಿನಗಳ ಬೇಡಿಕೆಯಾಗಿತ್ತು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕೇರಳ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಮಹಿಳೆಯರ ಬಡತನ ನಿರ್ಮೂಲನೆ ಯೋಜನೆಯಾದ ಕುಟುಂಬಶ್ರೀ ಮೂಲಕ ಮುಂದುವರಿದ ಸಮುದಾಯಗಳಲ್ಲಿ ಆರ್ಥಿಕವಾಗಿ ಹಿಂದುಳಿದವರ ಸಮೀಕ್ಷೆ ನಡೆಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಸಮೀಕ್ಷೆಯ ಭಾಗವಾಗಿ ರಾಜ್ಯದಾದ್ಯಂತ ಗ್ರಾಮ, ಪುರಸಭೆ ಮತ್ತು ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿ ವಾರ್ಡ್‌ನಲ್ಲಿ ಮುಂದುವರಿದ ಸಮುದಾಯಗಳಿಗೆ ಸೇರಿದ ಆರ್ಥಿಕವಾಗಿ ಅತಿ ಹಿಂದುಳಿದ ಐದು ಕುಟುಂಬಗಳನ್ನು ಗುರುತಿಸಲಾಗುತ್ತದೆ.
ಸಮೀಕ್ಷೆಗಾಗಿ ಒಟ್ಟು ₹75.67 ಲಕ್ಷ ಮಂಜೂರು ಮಾಡಲು ಅನುಮತಿ ನೀಡಲಾಗಿದೆ ಎಂದು ಅದು ಹೇಳಿದೆ.