ನ್ಯೂಯಾರ್ಕ್ :ಅಮೆರಿಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಇತರೆ ರಾಷ್ಟ್ರಗಳು ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ಗೆ ಪೈಪೋಟಿ ನೀಡುತ್ತಿವೆ. ಆದರೂ ನಾಸಾ ಹೊಸ ಸಂಶೋಧನೆಗಳ ಮೂಲಕ ಜಗತ್ತಿನ ಗಮನ ಸೆಳೆಯುತ್ತಿದೆ.
ಇದೀಗ ಮತ್ತೊಮ್ಮೆ ಜಗತ್ತು ತಿರುಗಿ ನೋಡುವಂತಹ ಸಾಧನೆಗೆ ನಾಸಾ ಸಿದ್ಧವಾಗಿದೆ. ಮಂಗಳ ಗ್ರಹದ ಮೇಲೆ ಈಗಾಗಲೇ ಒಂದು ಬಾರಿ ಕಲ್ಲು ಹಾಗೂ ಮಣ್ಣಿನ ಸ್ಯಾಂಪಲ್ ಪಡೆದಿರುವ ನಾಸಾ ರೋವರ್ ಪೆರ್‌ಸೆವೆರನ್ಸ್, ಈಗ ಮತ್ತೊಂದು ಹಂತದ ಸಂಶೋಧನೆಗೆ ಸಿದ್ಧವಾಗುತ್ತಿದೆ.
ಮಂಗಳ ಗ್ರಹದ ಮೇಲೆ ಜೀವಿಗಳು ಇವೆಯಾ ಎಂದು ಹುಡುಕುತ್ತಿರುವ ಮನುಷ್ಯನಿಗೆ ಪೆರ್‌ಸೆವೆರನ್ಸ್ ದೊಡ್ಡ ತಿರುವು ನೀಡುವ ನಿರೀಕ್ಷೆ ಇದೆ. ಈ ಮಾತಿಗೆ ಪೂರಕ ಎಂಬಂತೆ 2021ರ ಫೆಬ್ರವರಿಯಲ್ಲಿ 'ಮಂಗಳ' ಗ್ರಹದ ಮೇಲೆ ಲ್ಯಾಂಡ್ ಆಗಿದ್ದ ನಾಸಾ ರೋವರ್ ಪೆರ್‌ಸೆವೆರನ್ಸ್ ಹಲವು ಮಹತ್ವದ ಸಾಧನೆ ಮಾಡಿದೆ. ಮೊದಲ ಬಾರಿಗೆ ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಹಾರಿಸಿದ್ದ ಪೆರ್‌ಸೆವೆರನ್ಸ್ ರೋವರ್, ಮಂಗಳನ ಮೇಲೆ ಜೀವಿಗಳು ಇದ್ದಾವಾ? ಎಂದು ಹುಡುಕಾಟ ಆರಂಭಿಸಿದೆ.
'ಪೆರ್‌ಸೆವೆರನ್ಸ್' ಎಂಬ ಅದ್ಭುತಪೆರ್ಸೆವೆರನ್ಸ್ ಉಡಾವಣೆ ಮಾಡಿದಾಗ 1 ಟನ್ ತೂಕವಿತ್ತು. ರೋವರ್ ಎತ್ತರ 7.3 ಅಡಿಗಳಷ್ಟಾಗಿತ್ತು. ಉದ್ದ 6.7 ಅಡಿ ಇದ್ದು, ಮಂಗಳ ಗ್ರಹದ ಮೇಲೆ ಅಧ್ಯಯನ ನಡೆಸಲು ಅನುಕೂಲ ಆಗಲಿದೆ. ಪೆರ್‌ಸೆವೆರನ್ಸ್ ಕೈಗಳು 6 ಅಡಿಗಿಂತ ಉದ್ದ ಇವೆ, ಹಾಗೇ ಪೆರ್‌ಸೆವೆರನ್ಸ್ 6 ಚಕ್ರ ಹೊಂದಿದೆ. ತನ್ನಲ್ಲಿರುವ ಸಾಧನವನ್ನ ಬಳಸಿಕೊಂಡು ಸಾಧನೆ ಮಾಡಲು ಪೆರ್‌ಸೆವೆರನ್ಸ್ ಸಜ್ಜಾಗಿದೆ. ಕೆಲ ದಿನಗಳಲ್ಲಿ ಮಂಗಳನ ಮಹತ್ವದ ಮಾಹಿತಿಗಳು ಭೂಮಿಗೆ ತಲುಪಲಿವೆ. ಹೀಗಾಗಿ 'ನಾಸಾ' ವಿಜ್ಞಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ರೋವರ್‌ನ ಕಾಯುತ್ತಿದ್ದಾರೆ.
23 ಕ್ಯಾಮರಾ, 1 ಡ್ರಿಲ್ಲರ್..!
20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.
2026ಕ್ಕೆ ಮತ್ತೊಂದು ರೋವರ್
ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.
ರಾಕೆಟ್ ಲಾಂಚ್ ಮಾಡುತ್ತೆ..!
ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.
ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್
ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.