ಕೋಲ್ಕತ್ತಾ: ಪಶ್ಟಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಕ್ಟೋಬರ್‌ನಲ್ಲಿ ಇಟಲಿಯಲ್ಲಿ ನಡೆಯಲಿರುವ ವಿಶ್ವ ಶಾಂತಿ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ. ಕೇಂದ್ರ ಸರ್ಕಾರ "ಅಸೂಯೆಯಿಂದ" ಅನುಮತಿ ನಿರಾಕರಿಸಿದೆ ಎಂದು ದೀದಿ ಶನಿವಾರ ಹೇಳಿದ್ದಾರೆ.
ಉಪಚುನಾವಣೆಯಲ್ಲಿ ಭವಾನಿಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, ಇಟಲಿಗೆ ಭೇಟಿ ನೀಡಲು ಏಷ್ಯಾದ ಪ್ರತಿನಿಧಿಯಾಗಿ ಆಮಂತ್ರಿಸಲಾಗಿದೆ. ಆದರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನಾನು ಆ ದೇಶಕ್ಕೆ ಹೋಗುವುದನ್ನು ತಡೆದಿದೆ ಎಂದರು.
"ಅವರು (ಬಿಜೆಪಿ) ಶಾಂತಿಯ ಬಗ್ಗೆ ಮಾತನಾಡುತ್ತಾರೆ. ಆದರೆ ನನ್ನನ್ನು ಶಾಂತಿ ಸಮಾವೇಶದಲ್ಲಿ ಭಾಗವಹಿಸದಂತೆ ನಿರ್ಬಂಧಿಸಲಾಗಿದೆ. ಏಷ್ಯಾದ ಪ್ರತಿನಿಧಿಯಾಗಿ ನನ್ನನ್ನು ಆಹ್ವಾನಿಸಲಾಗಿದೆ. ಆದರೆ ಕೇಂದ್ರವು ರಾಜಕೀಯ ಕಾರಣಗಳನ್ನು ಉಲ್ಲೇಖಿಸಿ ಅನುಮತಿ ನಿರಾಕರಿಸಿದೆ ಮತ್ತು ಆ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುವುದು ಸರಿಯಲ್ಲ ಎಂದು ಹೇಳಿದೆ ಎಂದರು.
"ತಾಲಿಬಾನಿ ಬಿಜೆಪಿ"ಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಈ ಉಪಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬೇಕು ಎಂದು ಮತದಾರರನ್ನು ಒತ್ತಾಯಿಸಿದರು.
"ನೀವು ನನ್ನನ್ನು ತಡೆಯಲು ಸಾಧ್ಯವಿಲ್ಲ. ಭವಾನಿಪುರ ಮತದಾರರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನೆ ದಾರಿ ತೋರಿಸುತ್ತಾರೆ ಮತ್ತು ದೇಶದ ಉಳಿದ ಭಾಗಗಳಲ್ಲೂ ಇದನ್ನೇ ಅನುಸರಿಸುತ್ತಾರೆ" ಎಂದು ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.