ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸಿಪಿಐ ಯುವ ಮುಖಂಡ, ಜೆಎನ್‍ಯೂ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ನಯ್ಯ ಕುಮಾರ್ ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇಂದು ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ಕಚೇರಿಗೆ ತೆರಳಿದ ಉಭಯ ನಾಯಕರ ಪೈಕಿ ಕನ್ನಯ್ಯ ಕುಮಾರ್ ಅಧಿಕೃತವಾಗಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ತಾಂತ್ರಿಕ ಕಾರಣದಿಂದಾಗಿ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆ ಇಲ್ಲ
ತಾಂತ್ರಿಕ ಕಾರಣದಿಂದಾಗಿ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಸೇರ್ಪಡೆಯಾಗಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಜಿಗ್ನೇಶ್ ಮೇವಾನಿ ಮಾಹಿತಿ ನೀಡಿದ್ದು, ನಾನು ಓರ್ವ ಪಕ್ಷೇತರ ಶಾಸಕನಾಗಿದ್ದು ಈ ಹೊತ್ತಿನಲ್ಲಿ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾದರೆ ಬಹುಶಃ ನನ್ನ ಶಾಸಕತ್ವಕ್ಕೆ ಕುತ್ತಾಗಬಹುದು. ಆದರೆ ನಾನು ಈಗಲೂ ಕಾಂಗ್ರೆಸ್ ಪಕ್ಷದ ಸೈದ್ಧಾಂತಿಕ ಭಾಗವಾಗಿದ್ದು, ಮುಂದಿನ ಗುಜರಾತ್ ಚುನಾವಣೆಯನ್ನು ಕಾಂಗ್ರೆಸ್ ನೊಂದಿಗೆ ಇದ್ದು ಹೋರಾಡುತ್ತೇನೆ ಎಂದು ಹೇಳಿದರು.ಇದೇ ವೇಳೆ ಮಾತನಾಡಿದ ಕನ್ನಯ್ಯ ಕುಮಾರ್ ಅವರು, ಕಾಂಗ್ರೆಸ್ ಪಕ್ಷವು ದೊಡ್ಡ ಹಡಗಿನಂತಿದೆ, ಅದನ್ನು ಉಳಿಸಿದರೆ, ನಾನು ಅನೇಕ ಜನರ ಆಕಾಂಕ್ಷೆಗಳನ್ನು, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಮತ್ತು ಬಿಆರ್ ಅಂಬೇಡ್ಕರ್ ಅವರ ಸಮಾನತೆಯ ಕಲ್ಪನೆಯನ್ನು ಸಹ ರಕ್ಷಿಸಿದಂತಾಗುತ್ತದೆ. ಅದಕ್ಕಾಗಿಯೇ ನಾನು ಆ ಪಕ್ಷಕ್ಕೆ ಸೇರಿಕೊಂಡೆ ಎಂದು ಹೇಳಿದ್ದಾರೆ.
ಕನ್ನಯ್ಯ ಕುಮಾರ್ ಅವರು ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆ ದೆಹಲಿಯ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಎಡಪಂಥೀಯ ಸೈದ್ಧಾಂತಿಕ ಸ್ಪಷ್ಟತೆ ಇರುವ ಕನ್ನಯ್ಯ, ಸಂಘ ಪರಿವಾರ ಮತ್ತು ಬಿಜೆಪಿ ವಿರುದ್ಧ ವಿದ್ಯಾರ್ಥಿಯಾಗಿದ್ದಾಗಲೇ ಸಿಡಿದೆದ್ದಿದ್ದರು. 2016ರಲ್ಲಿ ಜೆಎನ್‍ಯೂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕನ್ನಯ್ಯ ಕುಮಾರ್ ದೇಶವಿರೋಧಿ ಘೋಷಣೆ ಕೂಗಿದ್ದಾರೆ ಎಂದು ಆರೋಪಿಸಿ ಕನ್ನಯ್ಯ ಸೇರಿ ಒಟ್ಟು 10 ಮಂದಿಯನ್ನು ದೇಶದ್ರೋಹ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಬಳಿಕ ತನಿಖಾಧಿಕಾರಿಗಳು ಕನ್ನಯ್ಯ ದೇಶದ್ರೋಹಿ ಘೋಷಣೆ ಕೂಗಿದ್ದಕ್ಕೆ ಯಾವುದೇ ಸಾಕ್ಷ್ಯಗಳು ನೀಡುವಲ್ಲಿ ವಿಫಲರಾದ ಕಾರಣ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಪಿಐ ಪಕ್ಷದ ಅಭ್ಯರ್ಥಿಯಾಗಿ ಬೇಗುಸರಾಯ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕನ್ನಯ್ಯ ಕುಮಾರ್ ಕೆಲವೇ ಅಂತರದಿಂದ ಸೋಲನುಭವಿಸಿದ್ದರು.
ಗುಜರಾತ್‍ನ ವಡ್ಗಾಂವ್ ಕ್ಷೇತ್ರದ ಪಕ್ಷೇತರ ಶಾಸಕರಾಗಿರುವ ಜಿಗ್ನೇಶ್ ಮೆವಾನಿ ದಲಿತ ಹೋರಾಟದಿಂದ ಗುರುತಿಸಿಕೊಂಡಿರುವ ಗುಜರಾತ್‍ನ ಪ್ರಭಾವಿ ದಲಿತ ಯುವ ಮುಖಂಡರಾಗಿದ್ದು, ಗುಜರಾತ್‍ನ ಉನ್ನಾವೋದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಡುವ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದರು. ಬಳಿಕ ಅದೇ ವರ್ಚಸ್ಸಿನಿಂದ ಕಳೆದ ಗುಜರಾತ್ ವಿಧಾನಸಭಾ ಚುನಾವಣೆಗೆ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು.
ಮುಂದಿನ ವರ್ಷ ನಡೆಯಲಿರುವ ಗುಜರಾತ್ ವಿಧಾನಸಭಾ ಚುನಾವಣೆಯ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕನ್ನಯ್ಯ ಕುಮಾರ್ ಮತ್ತು ಜಿಗ್ನೇಶ್ ಮೆವಾನಿಯನ್ನು ಕಾಂಗ್ರೆಸ್ ಬರಮಾಡಿಕೊಂಡಿದೆ. ಕಳೆದ ಒಂದೆರಡು ವಾರದಿಂದ ಕನ್ನಯ್ಯ ಮತ್ತು ಜಿಗ್ನೇಶ್ ಕಾಂಗ್ರೆಸ್‍ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಗುಲ್ಲೆದ್ದಿತ್ತು.
ಇದಕ್ಕೆ ಸಂಬಂಧಿಸಿದಂತೆ ಈ ಇಬ್ಬರೂ ಯುವ ನಾಯಕರು ಸ್ಪಷ್ಟನೆ ನೀಡದಿದ್ದರೂ ಅವರಿಬ್ಬರ ಮೌನ ಕಾಂಗ್ರೆಸ್‍ಗೆ ಸೇರ್ಪಡೆಯಾಗುವ ಕುರಿತು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ಅಧಿಕೃತವಾಗಿ ಕಾಂಗ್ರೆಸ್‍ಗೆ ಸೇರ್ಪಡೆಯಾಗುವ ಮೂಲಕ ಈ ಎಲ್ಲಾ ಚರ್ಚೆಗಳಿಗೆ ತೆರೆ ಬಿದ್ದಂತಾಗಿದೆ.