ವಿಯೆನ್ನಾ:ಜನಪ್ರಿಯ ಸುದ್ದಿಜಾಲ ತಾಣ 'ದಿ ವೈರ್' ಸುದ್ದಿಜಾಲತಾಣವು ಅಂತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ (ಐಪಿಐ)ಯ 2021ನೇ ಸಾಲಿನ ಫ್ರೀ ಮೆಡಿಯಾ ಪಯೋನಿಯರ್ (ಮುಕ್ತ ಮಾಧ್ಯಮ ಪ್ರವರ್ತಕ) ಪುರಸ್ಕಾರವನ್ನು ಗಳಿಸಿದೆ. ಭಾರತದಲ್ಲಿ ಡಿಜಿಟಲ್ ಸುದ್ದಿ ಕ್ರಾಂತಿಯ ನಾಯಕ ಹಾಗೂ ಸ್ವತಂತ್ರ, ಉನ್ನತ ಗುಣಮಟ್ಟದ ಪತ್ರಿಕೋದ್ಯಮದ ದಿಟ್ಟ ಸಂರಕ್ಷಕನಾಗಿ 'ದಿ ವೈರ್' ಈ ಪ್ರಶಸ್ತಿ ಪಾತ್ರವಾಗಿದೆಯೆಂದು ಪ್ರಶಸ್ತಿಯ ಆಯೋಜಕರು ಬಣ್ಣಿಸಿದ್ದಾರೆ.
''ಈ ವರ್ಷಐಪಿಐ-ಐಎಂಎಸ್ ಫ್ರೀ ಮೆಡಿಯಾ ಪಯೋನಿರ್ ಪುರಸ್ಕಾರಕ್ಕೆ ದಿ ವೈರ್ ಪತ್ರಿಕೆಯನ್ನು ಪರಿಗಣಿಸಲು ನಮಗೆ ತುಂಬಾ ಸಂತಸವಾಗುತ್ತದೆ. ಭಾರತದ ಡಿಜಿಟಲ್ ಸುದ್ದಿಯಲ್ಲಿ ಪರಿವರ್ತನೆಯನ್ನು ಹಾಗೂ ಗುಣಮಟ್ಟಕ್ಕೆ ಅದರ ಬದ್ಧತೆ ಮತ್ತು ಸ್ವತಂತ್ರ ಪತ್ರಿಕೋದ್ಯಮ ಪ್ರವೃತ್ತಿಯು ವಿಶ್ವದಾದ್ಯಂತದ ಐಪಿಐ ಸದಸ್ಯರಿಗೆ ಸ್ಪೂರ್ತಿಯಾಗಿದೆ'' ಎಂದು ಐಪಿಐನ ಕಾರ್ಯಕಾರಿ ನಿರ್ದೇಶಕ ಬಾರ್ಬರಾ ಟ್ರಿನೊಫಿ ಪ್ರಶಸ್ತಿ ಘೋಷಣೆ ಸಂದರ್ಭ ತಿಳಿಸಿದ್ದಾರೆ.
ರಾಜಕೀಯ ಒತ್ತಡವನ್ನು ಎದುರಿಸುತ್ತಲೇ ವಿಮರ್ಶಾತ್ಮಕ ವರದಿಗಾರಿಕೆ ಹಾಗೂ ಪತ್ರಿಕಾ ಸ್ವಾತಂತ್ರದೊಂದಿಗೆ ಅಗಾಧವಾದ ಕಾರ್ಯನಿರ್ವಹಿಸುತ್ತಿರುವ ದಿ ವೈರ್ ನ ಎಲ್ಲಾ ಸಿಬ್ಬಂದಿಗೆ ಅಭಿನಂದನೆಗಳು '' ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 16ರಂದು ಆಸ್ಟ್ರಿಯಾ ರಾಜಧಾನಿ ವಿಯೆನ್ನಾದಲ್ಲಿ ನಡೆಯಲಿರುವ ಐಪಿಐನ ವಾರ್ಷಿಕ ಸಮಾವೇಶದಲ್ಲಿ ಈ ಪುರಸ್ಕಾರವನ್ನು ಪ್ರದಾನ ಮಾಡಲಾಗುವುದು. ಐಪಿಐ ಮಾಧ್ಯಮ ಕಾರ್ಯನಿರ್ವಾಹಕರು, ಸಂಪಾದಕರು ಮತ್ತು ಪತ್ರಕರ್ತರ ಅಂತಾರಾಷ್ಟ್ರೀಯ ಒಕ್ಕೂಟವಾಗಿದ್ದು, ಜಾಗತಿಕವಾಗಿ ಪತ್ರಿಕಾ ಸ್ವಾತಂತ್ರವನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ. ವಾರ್ಷಿಕ ಫ್ರೀ ಮೆಡಿಯಾ ಪಯೋನಿಯರ್ ಪುರಸ್ಕಾರವನ್ನು 1996ರಲ್ಲಿ ಸ್ಥಾಪಿಸಲಾಗಿತ್ತು.