ನವದೆಹಲಿ: ಪ್ರಮುಖ ಸುದ್ದಿ ಮಾಧ್ಯಮ ಸಂಸ್ಥೆ ನ್ಯೂ ಡೆಲ್ಲಿ ಟೆಲಿವಿಷನ್(NDTV) ಮಾಲೀಕತ್ವದ ಬದಲಾವಣೆ, ಅದಾನಿ ಸಂಸ್ಥೆಯಿಂದ ಭಾರಿ ಹೂಡಿಕೆ ನಿರೀಕ್ಷೆಯಿದೆ ಎಂಬ ವರದಿಗಳು ಹರಿದಾಡಿವೆ. ಎನ್‌ಡಿಟಿವಿ ಷೇರು ಭರ್ಜರಿಯಾಗಿ ಏರಿಕೆ ಕಂಡಿದ್ದು, ಮಾಲೀಕತ್ವ ಬದಲಾವಣೆ ಬಗ್ಗೆ ಸುದ್ದಿಸ್ಫೋಟಗೊಂಡಿದ್ದು ಎಲ್ಲದ್ದಕ್ಕೂ ಎನ್‌ಡಿಟಿವಿ ದಿನದ ಅಂತ್ಯಕ್ಕೆ ಸ್ಪಷ್ಟನೆ ನೀಡಿದೆ. ಸಂಸ್ಥೆಯ ಬದಲಾವಣೆ ಬಗ್ಗೆ ಬಿಎಸ್‌ಇಗೆ ತಿಳಿಸುವುದು ಅನಿವಾರ್ಯ.
ಎನ್‌ಡಿಟಿವಿ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಿದ್ದು, "ಎನ್‌ಡಿಟಿವಿ ಲಿಮಿಟೆಡ್ ಮಾಲೀಕತ್ವದ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ, ಮಾಲೀಕತ್ವದ ಬದಲಾವಣೆ ಅಥವಾ ಯಾವುದೇ ರೀತಿಯ ಪಾಲುದಾರಿಕೆ, ಅನ್ಯಸಂಸ್ಥೆಯಿಂದ ಹೂಡಿಕೆ, ಯಾವುದೇ ಘಟಕದೊಂದಿಗೆ ಕೈಜೋಡಿಸುವುದರ ಬಗ್ಗೆ ಕೂಡಾ ಚರ್ಚೆಯಾಗಿಲ್ಲ. ಸಂಸ್ಥಾಪಕ-ಪ್ರವರ್ತಕರು, ರಾಧಿಕಾ ಮತ್ತು ಪ್ರಣಯ್ ರಾಯ್, ಇಬ್ಬರೂ ಪತ್ರಕರ್ತರಾಗಿದ್ದು, ಕಂಪನಿಯ ಶೇ 61.45 ಪಾಲನ್ನು ಹೊಂದಿದ್ದಾರೆ ಮತ್ತು ಅದರ ನಿಯಂತ್ರಣದಲ್ಲಿರುತ್ತಾರೆ, ಇದರಲ್ಲಿ ಯಾವುದೇ ಬದಲಾವಣೆಯಿಲ್ಲ'' ಎಂದು ತಿಳಿಸಲಾಗಿದೆ.
ಇದರ ಜೊತೆಗೆ ''ಷೇರುಪೇಟೆಯಲ್ಲಿ ಎನ್‌ಡಿಟಿವಿ ಷೇರುಗಳು ಹಠಾತ್ ಏರಿಕೆ ಆಗಿದ್ದೇಕೆ ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ,'' ಎಂದು ಸಂಸ್ಥೆ ಹೇಳಿಕೊಂಡಿದೆ.
"ಆಧಾರರಹಿತ ವದಂತಿಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ, ಅಥವಾ ಅದು ಆಧಾರ ರಹಿತ ಊಹೆಗಳಲ್ಲಿ ಭಾಗವಹಿಸುವುದಿಲ್ಲ" ಎಂದು ಎನ್‌ಡಿಟಿವಿ ಹೇಳಿದೆ.
ಗಾಳಿ ಸುದ್ದಿ ಹಬ್ಬಲು ಏನು ಕಾರಣ?: ಹಿರಿಯ ಪತ್ರಕರ್ತ ಸಂಜಯ್ ಪುಗಾಲಿಯಾ ಅವರನ್ನು ಅದಾನಿ ಸಮೂಹ ಸಂಸ್ಥೆಯ ಮಾಧ್ಯಮ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಇದಾದ ಬಳಿಕ ದೆಹಲಿ ಮೂಲದ ಮಾಧ್ಯಮ ಸಂಸ್ಥೆಯನ್ನು ಅದಾನಿ ಖರೀದಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತು. ದೆಹಲಿ ಮೂಲದ ಸಂಸ್ಥೆ ಎಂದರೆ ಎನ್‌ಡಿಟಿವಿಯೇ ಇರಬೇಕು ಎಂದು ಗಾಳಿಸುದ್ದಿಗೆ ಇನ್ನಷ್ಟು ರೆಕ್ಕೆಪುಕ್ಕ ಕಟ್ಟಲಾಯಿತು.
ಷೇರುಪೇಟೆಯಲ್ಲಿ ಜಿಗಿತ: ಎನ್‌ಡಿಟಿವಿ ಷೇರುಗಳು ಇಂದು 53 ವಾರಗಳಲ್ಲೇ ಕಂಡಿರದ ಜಿಗಿತ ಕಂಡು 87.60 ರು ಗೆ ಏರಿಕೆಯಾಗಿದೆ. ದಿನದ ಆರಂಭದಲ್ಲಿ 82.45 ರುನಿಂದ ಆರಂಭವಾಗಿ ಶೇ 9.96ರಷ್ಟು ಏರಿಕೆಯಾಗಿ 7.95 ರು ಏರಿಕೆ ಪಡೆದು ಭರ್ಜರಿ ವಹಿವಾಟು ನಡೆಸಿದೆ. ಇದು ಕೂಡಾ ಮಾಲೀಕತ್ವ ಬದಲಾವಣೆ, ಅದಾನಿ ಸಂಸ್ಥೆಯಿಂದ ಹೂಡಿಕೆ ಬಗ್ಗೆ ಎದ್ದಿದ್ದ ಗಾಳಿಸುದ್ದಿಗೆ
ಸಂಸ್ಥಾಪಕ-ಪ್ರವರ್ತಕರು, ರಾಧಿಕಾ ಮತ್ತು ಪ್ರಣಯ್ ರಾಯ್, ಇಬ್ಬರೂ ಪತ್ರಕರ್ತರಾಗಿದ್ದು ಇವರಿಬ್ಬರು ಸಿಇಒ ವಿಕ್ರಮಾದಿತ್ಯ ಚಂದ್ರ ಸೇರಿದಂತೆ ಕೆಲ ಅಧಿಕಾರಗಳ ವಿರುದ್ಧ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ ಡಿಐ) ನಿಯಮ ಉಲ್ಲಂಘನೆ ಆರೋಪದ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.
ಎನ್ಡಿಟಿಎಯ ಅಂಗ ಸಂಸ್ಥೆ ಲಂಡನ್ ನಲ್ಲಿ ಕಚೇರಿ ಹೊಂದಿರುವ ನೆಟ್ವರ್ಕ್ ಪಿಎಲ್ ಸಿ ಸಂಸ್ಥೆಯಲ್ಲಿ 163.43 ಮಿಲಿಯನ್ ಡಾಲರ್ ಗಳನ್ನು ಜಿಇ ಅಂಗ ಸಂಸ್ಥೆ ಎನ್ ಸಿಬಿಯು ಎಫ್ ಡಿಐ ಮೂಲಕ ಹೂಡಿಕೆ ಮಾಡಿತ್ತು. 2004ರಿಂದ 2010ರಲ್ಲಿ ಹಾಲೆಂಡ್, ಯುನೈಟೆಡ್ ಕಿಂಗ್ಡಮ್, ದುಬೈ, ಮಲೇಷಿಯಾ, ಮಾರಿಷಸ್ ..ಮುಂತಾದ ದೇಶಗಳಲ್ಲಿ ಎನ್ಡಿಟಿವಿ ಸುಮಾರು 32ಕ್ಕೂ ಅಧಿಕ ಅಂಗ ಸಂಸ್ಥೆಗಳನ್ನು ದೇಶ ವಿದೇಶಗಳಲ್ಲಿ ಹೊಂದಿದ್ದು, ಈ ಮೂಲಕ ತೆರಿಗೆ ವಂಚಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಐಸಿಐಸಿಐ ಬ್ಯಾಂಕ್ 48 ಕೋಟಿ ರೂಪಾಯಿ ನಷ್ಟ ಉಂಟಾಗುವಂತೆ ಮಾಡಿದ ಆರೋಪದಲ್ಲಿ 2017ರಲ್ಲಿ ಅವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.