ಮುಂಬೈ: ಭಾರತದ ಅತಿದೊಡ್ಡ ಮನರಂಜನಾ ಜಾಲ ಹೊಂದಿರುವ ಟಿವಿ ಮಾಧ್ಯಮ ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮೆಟೆಡ್ ಸಂಸ್ಥೆಯನ್ನು ಸೋನಿ ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಝೀ ಸಂಸ್ಥೆಯಲ್ಲಿ ಉಂಟಾದ ಆಂತರಿಕ ತಿಕ್ಕಾಟದಿಂದ ಹಲವು ಉನ್ನತ ಅಧಿಕಾರಿಗಳನ್ನು ವಜಾಗೊಳಿಸಲು ಷೇರುದಾರರು ಮುಂದಾಗಿದ್ದರು. ಇದಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹೊಸ ಒಪ್ಪಂದದಂತೆ ಸೋನಿ ಇಂಡಿಯಾ ಶೇ 53ರಷ್ಟು ಪಾಲು ಹೊಂದಲಿದ್ದು, ಮಿಕ್ಕಿದ್ದು ಝೀ ಪಾಲಾಗಲಿದೆ ಎಂದು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಹೇಳಲಾಗಿದೆ. ಜೊತೆಗೆ ಝೀ ಸಂಸ್ಥೆಯಲ್ಲಿ ಸೋನಿ ಇಂಡಿಯಾ ಸರಿ ಸುಮಾರು 1.58 ಬಿಲಿಯನ್ ಡಾಲರ್ ಮೊತ್ತ ಹೂಡಿಕೆ ಮಾಡಲಿದೆ. ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳನ್ನು ಸೋನಿ ಇಂಡಿಯಾದಿಂದಲೇ ನೇಮಿಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ವಿಲೀನ ಪ್ರಕ್ರಿಯೆ ಸುಮಾರು 90 ದಿನಗಳ ಮಟ್ಟಿಗೆ ನಡೆಯಲಿದ್ದು, ಈ ಅವಧಿಯಲ್ಲಿ ಉಭಯ ಸಂಸ್ಥೆಗಳ ಪ್ರತಿನಿಧಿಗಳು ಹಲವು ಒಪ್ಪಂದ, ನಿಯಮಾವಳಿಗಳಿಗೆ ಸಹಿ ಹಾಕಲಿದ್ದಾರೆ. ಝೀ ಕಾರ್ಯಕಾರಿ ಅಧಿಕಾರಿ ಪುನೀತ್ ಗೊಯೆಂಕಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಯತ್ನಿಸಲಾಗಿತ್ತು. ಆದರೆ, ಸದ್ಯಕ್ಕೆ ಸಂಸ್ಥೆ ಮುನ್ನಡೆಸುವ ಹೊಣೆ ಅವರ ಹೆಗಲಿಗೆ ಹಾಕಲಾಗಿರುವುದು ವಿಶೇಷ.
ಸೋನಿ ಇಂಡಿಯಾಕ್ಕೂ ಮೊದಲು ಝೀ ಸಂಸ್ಥೆಯಲ್ಲಿ ಇತರೆ ಸಂಸ್ಥೆಗಳು ಕೂಡಾ ಹೂಡಿಕೆ ಮಾಡಿವೆ. ಇವೆಸ್ಕೋ ಡೆವಲಪ್ಮೆಂಟ್ ಮಾರ್ಕೆಟ್ಸ್ ಫಂಡ್ ಹಾಗೂ ಒಎಫ್‌ಐ ಗ್ಲೋಬಲ್ ಚೀನಾ ಫಂಡ್ ಎಲ್‌ಎಲ್ಸಿ ಹೂಡಿಕೆ ಮಾಡಿದ್ದು, ಶೇ 17.9ರಷ್ಟು ಪಾಲು ಹೊಂದಿವೆ. ಈ ಎರಡು ಸಂಸ್ಥೆಗಳ ಪ್ರತಿನಿಧಿಗಳೇ ಕಳೆದ ವಾರ ನಡೆದ ಬೋರ್ಡ್ ಸಭೆಯಲ್ಲಿ ಗೊಯೆಂಕಾರನ್ನು ಕೆಳಗಿಳಿಸಲು ಪ್ರಸ್ತಾವನೆ ಮುಂದಿಟ್ಟಿದ್ದರು. 1992ರಲ್ಲಿ ಸಂಸ್ಥೆ ಹುಟ್ಟು ಹಾಕಿದ ಸುಭಾಷ್ ಚಂದ್ರ ಅವರ ಕುಟುಂಬಸ್ಥರು ಸಂಸ್ಥೆ ಮೇಲೆ ನಿಧಾನವಾಗಿ ಹಿಡಿತ ಕಳೆದುಕೊಳ್ಳುತ್ತಿದ್ದು, ಪುನೀತ್ ನಿರ್ಗಮನದಿಂದ ಇನ್ನಷ್ಟು ಅಂತರ ಉಂಟಾಗುತ್ತಿತ್ತು. ಸದ್ಯಕ್ಕೆ ಇಬ್ಬರು ಬೋರ್ಡ್ ಸದಸ್ಯರು ಸಂಸ್ಥೆ ತೊರೆದಿದ್ದಾರೆ.
ಷೇರುಪೇಟೆಯಲ್ಲಿ ಸಂತಸ: ಕಳೆದ ಒಂದು ತಿಂಗಳಲ್ಲಿ ಶೇ 62ರಷ್ಟು ಏರಿಕೆ ಕಂಡಿದ್ದ ಝೀ ಎಂಟರ್‌ಟೇನ್‌ಮೆಂಟ್ ಸದ್ಯ ಶೇ 9.99ರಷ್ಟು ಏರಿಕೆ (25.55 ರು) ಕಂಡು 281.25 ರು ನಂತೆ ಏರಿಕೆ ಕಂಡಿದೆ. ಸೋನಿ ಸಮೂಹ ಸಂಸ್ಥೆ ಜಾಗತಿಕವಾಗಿ ಶೇ 0.85ರಷ್ಟು ಏರಿಕೆಯಾಗಿದ್ದು, 12,445 ಜಪಾನ್ ಯೆನ್ ಮೌಲ್ಯ ಹೊಂದಿದೆ. ಈ ವೇಳೆ ಇನ್ ವೆಸ್ಕೋ ಸಂಸ್ಥೆ ಶೇ 1.04ರಷ್ಟು ಕುಸಿತ ಕಂಡು 23.72 ಯುಎಸ್ ಡಾಲರ್ ಆಗಿದೆ. ಒಟ್ಟಾರೆ, ಸೋನಿ-ಝೀ ಎಂಟರ್‌ಟೇನ್‌ಮೆಂಟ್ ವಿಲೀನದ ಸ್ವರೂಪ ಇನ್ನು ಮೂರು ತಿಂಗಳಲ್ಲಿ ಸಂಪೂರ್ಣವಾಗಿ ತಿಳಿಯಲಿದೆ.