ತಿರುವನಂತಪುರ: ಪುರಾತನ ವಸ್ತುಗಳು ಎಂದು ಹಲವರನ್ನು ಯಾಮಾರಿಸಿ ಕೋಟಿಗಟ್ಟಲೆ ಹಣ ಸಂಪಾದಿಸಿದ್ದ ಕೇರಳದ ಬಂಧಿತ ವ್ಯಾಪಾರಿ ಮಾನ್ಸನ್ ಮಾವುಂಕಲ್ ಅವರ ಮನೆಯಲ್ಲಿ ಪತ್ತೆಯಾದ ವಸ್ತುಗಳು ಮತ್ತು ಐಷಾರಾಮಿ ಕಾರುಗಳ ತಪಾಸಣೆಯನ್ನು ಕೇರಳದ ಪುರಾತತ್ವ ಇಲಾಖೆ ಮತ್ತು ಮೋಟಾರು ವಾಹನ ಇಲಾಖೆ (ಎಂವಿಡಿ) ಶನಿವಾರ ಪೂರ್ಣಗೊಳಿಸಿದ್ದು, ಶೀಘ್ರವೇ ತಮ್ಮ ವರದಿಗಳನ್ನು ಪೊಲೀಸರಿಗೆ ಸಲ್ಲಿಸಲಿದೆ.
ಅಪರೂಪದ ಮತ್ತು ಪುರಾತನ ವಸ್ತುಗಳನ್ನು ಹೊಂದಿದ್ದೇನೆಂದು ಹೇಳಿಕೊಂಡು ಹಲವಾರು ಜನರಿಗೆ ಸುಮಾರು 10 ಕೋಟಿ ವಂಚನೆ ಮಾಡಿದ ದೂರುಗಳ ಆಧಾರದ ಮೆಲೆ ಚೇರ್ಥಲ ನಿವಾಸಿ ಮಾವುಂಕಲ್‌ನನ್ನು ಕೇರಳ ಕ್ರೈಂ ಬ್ರಾಂಚ್ ಪೊಲೀಸರು ಕಳೆದ ವಾರ ಬಂಧಿಸಿದ್ದರು.
ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಪುರಾತತ್ವ ಇಲಾಖೆ ಮತ್ತು ಎಂವಿಡಿ, ಮಾವುಂಕಲ್ ಮನೆಯಲ್ಲಿ ತಮ್ಮ ತಪಾಸಣೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅವರು ತನಿಖಾ ಸಂಸ್ಥೆಗೆ ಸದ್ಯದಲ್ಲೇ ವರದಿಯನ್ನು ಸಲ್ಲಿಸುತ್ತಾರೆ.
ಪುರಾತನ ವಸ್ತುಗಳೆಂದು ಹೇಳಿ ಮಾವುಂಕಲ್ ಜನರಿಗೆ ನೀಡಿದ್ದ ವಸ್ತುಗಳು ಸ್ಥಳೀಯ ಕುಶಲಕರ್ಮಿಗಳು ತಯಾರಿಸಿದ್ದವುಗಳಾಗಿವೆ ಮತ್ತು ಪುರಾತತ್ವ ಇಲಾಖೆಯು ಕಲಾಕೃತಿಗಳನ್ನು ಪರೀಕ್ಷಿಸಲು ಸಿದ್ಧವಾಗಿದೆ ಎಂದು ಅಪರಾಧ ವಿಭಾಗವು ತಿಳಿಸಿದೆ.
ಆರೋಪಿಗಳ ನಿವಾಸದಲ್ಲಿ ಪತ್ತೆಯಾದ ಸುಮಾರು ಒಂದು ಡಜನ್ ವಿದೇಶಿ ವಾಹನಗಳ ದಾಖಲೆಗಳನ್ನು ಎಂವಿಡಿ ಪರಿಶೀಲಿಸಿದೆ.
ಮಾವುಂಕಲ್ ವಂಚನೆ ಕುರಿತು ಸಿಬಿಐ ತನಿಖೆಯ ಬೇಡಿಕೆಯನ್ನು ಪುನರುಚ್ಚರಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿ ಎಂ ಸುಧೀರನ್, ಈ ವಿಷಯದಲ್ಲಿ ರಾಜ್ಯ ಗುಪ್ತಚರ ಘಟಕವು 'ವಿಫಲವಾಗಿದೆ' ಎಂದು ಆರೋಪಿಸಿದ್ದಾರೆ.
ರಾಜ್ಯ ಸರ್ಕಾರದೊಂದಿಗೆ ಮಾವುಂಕಲ್‌ನ ಸಂಪರ್ಕದ ಬಗ್ಗೆ ಕ್ರೈಂ ಬ್ರಾಂಚ್ ತನಿಖೆ ನಡೆಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ ಸುರೇಂದ್ರನ್ ಆರೋಪಿಸಿದ್ದಾರೆ. 'ರಾಜ್ಯ ಸರ್ಕಾರದೊಂದಿಗೆ ಮಾವುಂಕಲ್‌ನ ಸಂಬಂಧದ ಬಗ್ಗೆಯೂ ತನಿಖೆ ನಡೆಸಬೇಕು. ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ಅಧಿಕಾರಶಾಹಿಗಳೊಂದಿಗಿನ ಸಂಬಂಧವನ್ನು ತನಿಖೆ ಮಾಡಲು ಅಪರಾಧ ವಿಭಾಗಕ್ಕೆ ಸಾಧ್ಯವಾಗುವುದಿಲ್ಲ'ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ, ಎರ್ನಾಕುಲಂನ ನ್ಯಾಯಾಲಯವು ಮಾವುಂಕಲ್ ಅವರನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.