ಮುಂಬೈ: ದೇಶದಲ್ಲಿ ಕೋವಿಡ್ ಲಸಿಕೆಯ 100 ಕೋಟಿ ಡೋಸ್ಗಳನ್ನು ನೀಡಲಾಗಿದೆ ಎಂಬ ಪ್ರತಿಪಾದನೆ ಸುಳ್ಳು. ಇದುವರಿಗೆ ಅರ್ಹ ನಾಗರಿಕರಿಗೆ 23 ಕೋಟಿಗಿಂತ ಹೆಚ್ಚು ಡೋಸ್ ಗಳನ್ನು ಮಾತ್ರ ನೀಡಲಾಗಿದೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಶನಿವಾರ ಪಕ್ಷದ ಸಭೆಯಲ್ಲಿ ಮಾತನಾಡಿದ ರಾವತ್, ಕೋವಿಡ್ ಲಸಿಕೆಯ 100 ಕೋಟಿ ಲಸಿಕೆಗಳನ್ನು ನೀಡಲಾಗಿದೆ ಎಂಬ ಪ್ರತಿಪಾದನೆ ಸುಳ್ಳು ಎಂಬುದಕ್ಕೆ ತಾನು ಪುರಾವೆ ನೀಡಬಲ್ಲೆ ಎಂದಿದ್ದಾರೆ.
''ಎಷ್ಟೊಂದು ಸುಳ್ಳು ಹೇಳುತ್ತೀರಿ'' ಎಂದು ಯಾರೊಬ್ಬರ ಹೆಸರು ಹೇಳದೆ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ. ''ಕಳೆದ 15 ದಿನಗಳಲ್ಲಿ 20 ಹಿಂದೂ ಹಾಗೂ ಸಿಕ್ಖರನ್ನು ಹತ್ಯೆಗೈಯಲಾಗಿದೆ. 17ರಿಂದ 18 ಯೋಧರು ಹುತಾತ್ಮರಾಗಿದ್ದಾರೆ. ಅರುಣಾಚಲಪ್ರದೇಶ ಹಾಗೂ ಲಡಾಖ್ನಲ್ಲಿ ಚೀನಾ ಸಮಸ್ಯೆ ಸೃಷ್ಟಿಸುತ್ತಿದೆ. ಆದರೆ, ಅವರು ಕೋವಿಡ್ ಲಸಿಕೆಯ 100 ಕೋಟಿ ಡೋಸ್ಗಳನ್ನು ನೀಡಿದ್ದೇವೆ ಎಂದು ಸುಳ್ಳು ಹೇಳಿ ಸಂಭ್ರಮಪಡುತ್ತಿದ್ದಾರೆ'' ಎಂದು ಅವರು ಹೇಳಿದರು.
ಕೋವಿಡ್ ಲಸಿಕೆಯ 100 ಕೋಟಿ ಡೋಸ್ಗಳನ್ನು ನೀಡಿರುವ ಬಗ್ಗೆ ಲೆಕ್ಕ ಇರಿಸಿದವರು ಯಾರು ಎಂದು ಸಂಜಯ್ ರಾವತ್ ಅವರು ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮಹಾರಾಷ್ಟ್ರದ ಬಿಜೆಪಿ ವಕ್ತಾರ ಕೇಶವ್ ಉಪಾಧ್ಯ ಪ್ರತಿಕ್ರಿಯಿಸಿ, ಶಿವಸೇನೆ ನಾಯಕ ಸಂಜಯ್ ರಾವತ್ ಅವರು ಆಧಾರ ರಹಿತ ಹೇಳಿಕೆ ನೀಡಿದ್ದಾರೆ ಎಂದಿದ್ದಾರೆ.
ಅಂಕಿ-ಅಂಶಗಳು ಸ್ಪಷ್ಟವಾಗಿರುವಾಗ ಕೋವಿಡ್ ಲಸಿಕೆಯ 100 ಕೋಟಿ ಡೋಸ್ಗಳನ್ನು ನೀಡಿರುವುದು ಸುಳ್ಳು ಎಂಬ ಸಂಜಯ್ ರಾವತ್ ಅವರ ಹೇಳಿಕೆ ಹೊರ ಬಿದ್ದಿದೆ. ಇದು ಹಾಸ್ಯಾಸ್ಪದ ಎಂದು ಅವರು ಹೇಳಿದ್ದಾರೆ.