HEALTH TIPS

ಉತ್ತರಾಖಂಡದಲ್ಲಿ ಮಳೆಯ ಆರ್ಭಟ: 11 ಮಂದಿ ಸಾವು, ನೈನಿತಾಲ್‌ಗೆ ಸಂಪರ್ಕ ಕಡಿತ

                 ಡೆಹ್ರಾಡೂನ್‌/ ನೈನಿತಾಲ್‌: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಂಗಳವಾರ ಉತ್ತರಾಖಂಡದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಹತ್ತಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಮನೆಗಳು ನೆಲಕ್ಕುರುಳಿವೆ ಹಾಗೂ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.


               ಜನಪ್ರಿಯ ಪ್ರವಾಸಿ ತಾಣವಾಗಿರುವ ನೈನಿತಾಲ್‌ಗೆ ಸಂಪರ್ಕಿಸುವ ಮೂರೂ ರಸ್ತೆಗಳು ಸರಣಿ ಭೂಕುಸಿತದ ಪರಿಣಾಮ ಕುಸಿದಿವೆ. ಇದರಿಂದಾಗಿ ನೈನಿತಾಲ್‌ಗೆ ಇರುವ ಎಲ್ಲ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

                   ಮಳೆಯ ಕಾರಣಗಳಿಂದಾಗಿ ಇಂದು ಕನಿಷ್ಠ 11 ಮಂದಿ ಮೃತಪಟ್ಟಿರುವುದು ವರದಿಯಾಗಿದೆ. ಮೇಘ ಸ್ಫೋಟ ಮತ್ತು ಭೂಕುಸಿತದ ಪರಿಣಾಮ ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿರುವುದಾಗಿ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹೇಳಿದ್ದಾರೆ.

            ಸೋಮವಾರದ ಮಳೆಯಲ್ಲಿ ಐವರು ಮೃತಪಟ್ಟಿದ್ದರು. ಈವರೆಗೂ ಮಳೆಯ ಕಾರಣಗಳಿಂದ ಉತ್ತರಾಖಂಡದಲ್ಲಿ ಸಾವಿಗೀಡಾದವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಭಾರತೀಯ ಸೇನೆಯ ಮೂರು ಹೆಲಿಕಾಪ್ಟರ್‌ಗಳು ಬರಲಿವೆ ಎಂದು ಮುಖ್ಯಮಂತ್ರಿ ಧಾಮಿ ಭರವಸೆ ನೀಡಿದ್ದಾರೆ.

         ಎರಡು ಹೆಲಿಕಾಪ್ಟರ್‌ಗಳು ನೈನಿತಾಲ್‌ನತ್ತ ಸಾಗಲಿವೆ ಹಾಗೂ ಒಂದು ಹೆಲಿಕಾಪ್ಟರ್‌ ಗರ್‌ವಾಲ್‌ ವಲಯದಲ್ಲಿ ಸಿಲುಕಿರುವ ಜನರ ರಕ್ಷಣೆ ನಡೆಸಲಿದೆ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಎಲ್ಲ ಕ್ರಮಕೈಗೊಂಡಿರುವುದಾಗಿ ಧಾಮಿ ಹೇಳಿದ್ದಾರೆ.

              ಚಾರ್‌ಧಾಮ್‌ ಯಾತ್ರಿಕರು, ಪ್ರಸ್ತುತ ಇರುವ ಸ್ಥಳದಲ್ಲೇ ಉಳಿಯುವಂತೆ ಪ್ರಕಟಿಸಲಾಗಿದೆ. ವಾತಾವರಣ ಉತ್ತಮಗೊಳ್ಳುವವರೆಗೂ ಪ್ರಯಾಣ ಮುಂದುವರಿಸದಂತೆ ತಿಳಿಸಲಾಗಿದೆ.

     ನೈನಿ ಕೆರೆಯ ಸಮೀಪದ ನೈನಿ ದೇವಿ ದೇವಾಲಯ ಮತ್ತು ನೈನಿತಾಲ್‌ನ ಮಾಲ್‌ ರೋಡ್‌ ಜಲಾವೃತವಾಗಿವೆ. ಭೂಕುಸಿತದಿಂದಾಗಿ ಹಾಸ್ಟೆಲ್‌ ಕಟ್ಟಡಕ್ಕೆ ಹಾನಿಯಾಗಿದೆ. ನಗರದಿಂದ ಹೊರ ಹೋಗುವ ಎಲ್ಲ ರಸ್ತೆಗಳ ಸಂಪರ್ಕ ಕಡಿತವಾಗಿದ್ದು, ರಾಮನಗರ್-ರಾನಿಖೇತ್‌ ರಸ್ತೆಯ ಲೆಮನ್‌ ಟ್ರೀ ರೆಸಾರ್ಟ್‌ನಲ್ಲಿ ಸುಮಾರು 100 ಜನ ಸಿಲುಕಿದ್ದಾರೆ. ಕೋಸಿ ನದಿಯು ಉಕ್ಕಿ ಹರಿಯುತ್ತಿದ್ದು, ರೆಸಾರ್ಟ್‌ನೊಳಗೆ ನೀರು ನುಗ್ಗಿದೆ.

             ಭಾರಿ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಧಾಮಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಮಾಹಿತಿ ಪಡೆದಿದ್ದಾರೆ. 'ಪರಿಸ್ಥಿತಿ ನಿಭಾಯಿಸಲು ಕೇಂದ್ರದಿಂದ ಅಗತ್ಯವಿರುವ ಎಲ್ಲ ಸಹಾಯವನ್ನು ನೀಡುವುದಾಗಿ' ಮೋದಿ ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries