ನವದೆಹಲಿ: ಭಯೋತ್ಪಾದಕ ಕೃತ್ಯಗಳನ್ನು ಪರಿಣಾಮಕಾರಿಯಾಗಿ ನಿಗ್ರಹಿಸುವ ನಿಟ್ಟಿನಲ್ಲಿ ಭಾರತ ಮತ್ತು ಶ್ರೀಲಂಕಾ 12 ದಿನ ಅವಧಿಯ ದೊಡ್ಡ ಸೇನಾ ಕಾರ್ಯಾಚರಣೆಯೊಂದನ್ನು ಹಮ್ಮಿಕೊಂಡಿವೆ.
'ಮಿತ್ರ ಶಕ್ತಿ' ಹೆಸರಿನ ಸೇನಾ ಕಾರ್ಯಾಚರಣೆಯ 8ನೇ ಆವೃತ್ತಿಯು ಅಕ್ಟೋಬರ್ 4ರಿಂದ 15ರವರೆಗೆ ಶ್ರೀಲಂಕಾದ ಅಂಪಾರದಲ್ಲಿರುವ ಯುದ್ಧ ತರಬೇತಿ ಶಾಲೆಯಲ್ಲಿ ನಡೆಯಲಿದೆ ಎಂದು ರಕ್ಷಣಾ ಸಚಿವಾಲಯ ಶನಿವಾರ ಹೇಳಿದೆ.
'ಉಭಯ ರಾಷ್ಟ್ರಗಳ ಸೇನೆಗಳ ನಡುವೆ ಬಾಂಧವ್ಯ ವೃದ್ಧಿಸುವುದು ಮತ್ತು ಆಂತರಿಕ ಕಾರ್ಯಾಚರಣೆ ಬಲಪಡಿಸುವುದು ಭಯೋತ್ಪಾದನೆ ನಿಗ್ರಹದ ಮಾಹಿತಿ ಹಂಚಿಕೊಳ್ಳುವುದು ಕಾರ್ಯಾಚರಣೆಯ ಉದ್ದೇಶವಾಗಿದೆ' ಎಂದು ತಿಳಿಸಿದೆ.
ಭಾರತೀಯ ಸೇನೆಯ ಎಲ್ಲ ವಿಭಾಗದ 120 ಸಿಬ್ಬಂದಿಯ ತಂಡವು ಶ್ರೀಲಂಕಾ ಸೇನೆಯ ಬೆಟಾಲಿಯನ್ ಬಲದ ತುಕಡಿಯೊಂದಿಗೆ ಭಾಗವಹಿಸಲಿದೆ. ಭಯೋತ್ಪಾದನೆ ವಿರುದ್ಧದ ವಾತಾವರಣದಲ್ಲಿ ಸೇನಾ ಉಪ ಘಟಕದ ಹಂತದಲ್ಲಿ ಯುದ್ಧತಂತ್ರದ ಮಟ್ಟದ ಕಾರ್ಯಾಚರಣೆಯನ್ನು ಇದು ಒಳಗೊಂಡಿರುತ್ತದೆ' ಎಂದು ಸಚಿವಾಲಯದ ಹೇಳಿಕೆಯು ತಿಳಿಸಿದೆ.
ದಕ್ಷಿಣ ಏಷಿಯಾ ರಾಷ್ಟ್ರಗಳ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕಾರ್ಯಾಚರಣೆ ಮುಖ್ಯವಾಗಿದೆ. ಎರಡೂ ಸೇನೆಗಳ ನಡುವೆ ಸಹಭಾಗಿತ್ವ ಮತ್ತು ಸಹಕಾರ ವೃದ್ಧಿಗೆ ಇದು ಸಹಕಾರಿಯಾಗಿದೆ ಎಂದು ಸಚಿವಾಲಯ ಹೇಳಿದೆ.