ನವದೆಹಲಿ: ನಾಲ್ಕು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳಾಗಿ ನೇಮಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಹಿಂದೆ ಶಿಫಾರಸು ಮಾಡಿದ್ದ 12 ಹೆಸರುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಉನ್ನತ ಮೂಲಗಳು ಇದನ್ನು ದೃಢಪಡಿಸಿವೆ.
ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಿಸಬೇಕು ಎಂಬ ಶಿಫಾರಸು ಕುರಿತ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೋರಿ ಕೇಂದ್ರ ಸರ್ಕಾರವು ಭಿನ್ನ ಸಂದರ್ಭಗಳಲ್ಲಿ ಕೊಲಿಜಿಯಂಗೆ ಈ ಶಿಫಾರಸುನ್ನು ವಾಪಸು ಕಳುಹಿಸಿದೆ.
ಇದರಲ್ಲಿ ಕಲ್ಕತ್ತ ಹೈಕೋರ್ಟ್‌ಗೆ ನೇಮಿಸಲು ಶಿಫಾರಸು ಮಾಡಿದ್ದ ಐವರ ಹೆಸರುಗಳು, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ಗೆ ಶಿಫಾರಸು ಮಾಡಿದ್ದ ಮೂವರು ಹಾಗೂ ಕರ್ನಾಟಕ, ಅಲಹಾಬಾದ್ ಹೈಕೋರ್ಟ್‌ಗಳಿಗೆ ನೇಮಿಸಲು ಶಿಫಾರಸು ಮಾಡಿದ್ದ ತಲಾ ಇಬ್ಬರು ಹೆಸರುಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಈ ವರ್ಷದ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವಿನ ಅವಧಿಯಲ್ಲಿ ಈ 12 ಹೆಸರುಗಳ ಶಿಫಾರಸು ಕುರಿತು ಕೊಲಿಜಿಯಂ ಪುನರುಚ್ಚರಿಸಿತ್ತು. ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಹೊಸದಾಗಿ ನೀಡಿದ ಪಟ್ಟಿಯನ್ನು ಪರಿಗಣಿಸಲಾಗುತ್ತಿದೆ. ಈ ಹೆಸರುಗಳನ್ನು ಇನ್ನು ಪರಿಗಣಿಸಬೇಕಿದೆ ಎಂದು ತಿಳಿಸಿವೆ.
ಈಗಿರುವ ಪ್ರಕ್ರಿಯೆಯ ಅನುಸಾರ ಹೈಕೋರ್ಟ್‌ನ ಕೊಲಿಜಿಯಂ, ನ್ಯಾಯಮೂರ್ತಿಗಳಾಗಿ ನೇಮಿಸಬಹುದು ಎನ್ನಲಾದವರ ಹೆಸರುಗಳನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಲಿದೆ. ಸಚಿವಾಲಯವು ಹೆಚ್ಚಿನ ವಿವರಗಳ ಜೊತೆಗೆ ಇದನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂಗೆ ಕಳುಹಿಸಲಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ ಈ ಪಟ್ಟಿಯನ್ನು ಪರಿಷ್ಕರಿಸಲಿದ್ದು, ಅಂತಿಮವಾಗಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡಬಹುದಾದವರ ಹೆಸರು ಶಿಫಾರಸು ಮಾಡಲಿದೆ. ಈಗ ಉಲ್ಲೇಖಿಸಲಾದ 12 ಜನರ ಹೆಸರುಗಳನ್ನು ಆಯಾ ಹೈಕೋರ್ಟ್‌ಗಳ ಕೊಲಿಜಿಯಂಗಳು ಎರಡರಿಂದ ನಾಲ್ಕು ವರ್ಷದ ಹಿಂದೆ ಕಳುಹಿಸಿದ್ದವು.
ಏಳು ನ್ಯಾಯಮೂರ್ತಿಗಳ ನೇಮಕ: ಈ ಮಧ್ಯೆ, ಶನಿವಾರ ಏಳು ಮಂದಿ ವಕೀಲರನ್ನು ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲಾಗಿದೆ. ಅದಕ್ಕೂ ಹಿಂದೆ ಅಕ್ಟೋಬರ್ 14ರಂದು ಮೂರು ಹೈಕೋರ್ಟ್‌ಗಳಿಗೆ ಏಳು ಮಂದಿ ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗಿತ್ತು.