ನವದೆಹಲಿ: ಭಾರತ-ಚೀನಾ ಕಾರ್ಪ್ಸ್ ಕಮಾಂಡರ್ ಗಳ ಮಟ್ಟದ 13ನೇ ಸುತ್ತಿನ ಮಾತುಕತೆ ವೇಳೆ ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಇರುವ ಇತರ ವಿಷಯಗಳನ್ನು ಬಗೆಹರಿಸುವ ಕುರಿತು ಗಮನ ಹರಿಸುವ ಬಗ್ಗೆ ಚರ್ಚೆಗಳು ನಡೆದವು ಎಂದು ಭಾರತೀಯ ಸೇನೆ ತಿಳಿಸಿದೆ.
ನಿನ್ನೆ ನಡೆದ 13ನೇ ಸುತ್ತಿನ ಮಾತುಕತೆಯ ವಿವರ ನೀಡಿದ ಭಾರತೀಯ ಸೇನೆಯ ಉನ್ನತ ಅಧಿಕಾರಿಗಳು, ಸಭೆಯಲ್ಲಿ, ಭಾರತೀಯ ಕಮಾಂಡರ್ ಗಳು, ಗಡಿ ವಾಸ್ತವ ರೇಖೆಯ ಉಳಿದ ಪ್ರದೇಶಗಳ ಸಮಸ್ಯೆಗಳನ್ನು ಪರಿಹರಿಸಲು ರಚನಾತ್ಮಕ ಸಲಹೆಗಳನ್ನು ನೀಡಿದರು. ಆದರೆ ಚೀನಾದ ಕಮಾಂಡರ್ ಗಳು ಅದಕ್ಕೆ ಒಪ್ಪಿಕೊಳ್ಳಲಿಲ್ಲ ಹೀಗಾಗಿ ಪ್ರಸ್ತಾವನೆಯಿಂದ ಯಾವುದೇ ರೀತಿಯಲ್ಲಿ ಮುಂದುವರಿಯಲು ಸಾಧ್ಯವಾಗಲಿಲ್ಲ. ಉಳಿದ ಪ್ರದೇಶಗಳ ಕುರಿತ ನಿರ್ಣಯದಲ್ಲಿ ಸಭೆಯಲ್ಲಿ ಯಾವುದೇ ಫಲಿತಾಂಶ ಸಾಧ್ಯವಾಗಲಿಲ್ಲ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಕಡೆಯವರು ಮಾತುಕತೆಯನ್ನು ನಿರ್ವಹಿಸಲು ಮತ್ತು ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಸ್ಥಿರತೆಯನ್ನು ಕಾಯ್ದುಕೊಳ್ಳಲು ಒಪ್ಪಿಕೊಂಡಿದ್ದಾರೆ. ಚೀನಾದ ಕಡೆಯವರು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ದೃಷ್ಟಿಕೋನವನ್ನು ಪರಿಗಣಿಸುತ್ತಾರೆ. ಉಳಿದ ಸಮಸ್ಯೆಗಳ ಆರಂಭಿಕ ಪರಿಹಾರಕ್ಕಾಗಿ ಮುಂದೆ ಕೆಲಸ ಮಾಡುತ್ತಾರೆ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.