ಮದುರೈ: ದೇಶದಲ್ಲಿ ಒಂದೆಡೆ ಪೆಟ್ರೋಲ್- ಡಿಸೇಲ್, ಅಡುಗೆ ಅನಿಲದಿಂದ ಹಿಡಿದು ಖ್ಯಾದತೈಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ.
ಇದೇ ವೇಳೆ ನಮ್ಮ ದೈನಂದಿನ ಬಳಕೆಯಲ್ಲೂ ಉಪಯುಕ್ತವಾದ ಒಂದು ವಸ್ತುವಿನ ಬೆಲೆ ಮಾತ್ರ ಕಳೆದ 14 ವರ್ಷಗಳಿಂದ ಹೆಚ್ಚಾಗಿರಲಿಲ್ಲ. ಆದರೆ, ಇದೀಗ ಕಷ್ಟ ಕಾಲದಲ್ಲಿ ಅದೂ ಹೆಚ್ಚಾಗಲಿದೆ.
ಹೌದು. 14 ವರ್ಷಗಳ ದೀರ್ಘಾವಧಿಯ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆಯಾಗಲಿದೆ. ಇಲ್ಲಿಯವರೆಗೂ ಬೆಂಕಿ ಪೊಟ್ಟಣದ ದರ 1 ರೂ. ಇತ್ತು. ಇದೀಗ 2 ರೂ.ಗೆ ಏರಿಕೆಯಾಗುತ್ತಿದೆ. ಈ ಹೊಸ ಬೆಲೆ ಡಿಸೆಂಬರ್ 1ರಿಂದ ಜಾರಿಯಾಗಲಿದೆ.
2007ರಲ್ಲಿ ಏರಿಕೆಯಾಗಿದ್ದ ಬೆಂಕಿ ಪೊಟ್ಟಣ ಬೆಲೆ
ಐದು ಪ್ರಮುಖ ಉದ್ಯೋಗ ಒಕ್ಕೂಟಗಳ ಪ್ರತಿನಿಧಿಗಳು ಸರ್ವಾನುಮತದಿಂದ ಬೆಂಕಿ ಪೊಟ್ಟಣದ ಬೆಲೆಯನ್ನು 1 ರೂ.ನಿಂದ 2 ರೂ.ಗೆ ಹೆಚ್ಚಿಸಲು ನಿರ್ಣಯವನ್ನು ಕೈಗೊಂಡಿವೆ. ಇದಕ್ಕೂ ಮೊದಲು 2007ರಲ್ಲಿ ಬೆಂಕಿ ಪೊಟ್ಟಣದ ಬೆಲೆಯನ್ನು ಪರಿಷ್ಕರಿಸಲಾಗಿತ್ತು.
ಆಗ ಬೆಂಕಿ ಪೊಟ್ಟಣದ ಬೆಲೆಯನ್ನು 50 ಪೈಸೆಯಿಂದ 1 ರೂ.ಗೆ ಹೆಚ್ಚಿಸಲಾಗಿತ್ತು. ಗುರುವಾರ ತಮಿಳುನಾಡಿನ ಶಿವಕಾಶಿಯಲ್ಲಿ ಮುಕ್ತಾಯಗೊಂಡ ಆಲ್ ಇಂಡಿಯಾ ಚೇಂಬರ್ ಆಫ್ ಮ್ಯಾಚಿಸ್ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕಚ್ಚಾ ಸಾಮಗ್ರಿಗಳಲ್ಲಿ ಆಗುತ್ತಿರುವ ಬೆಲೆ ಏರಿಕೆಯೇ ಈಗ ಬೆಂಕಿ ಪೊಟ್ಟಣ ಬೆಲೆ ಏರಿಕೆಗೆ ಕಾರಣ ಎಂದು ಉದ್ಯಮ ಪ್ರತಿನಿಧಿಗಳು ಹೇಳಿದ್ದಾರೆ.
ಬೆಲೆ ಏರಿಕೆಗೆ ಕಾರಣ
ಸಾಮಾನ್ಯವಾಗಿ ಬೆಂಕಿ ಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ ಎಂದು ತಯಾರಕರು ತಿಳಿಸಿದ್ದಾರೆ. ಒಂದು ಕೆಜಿ ಕೆಂಪು ರಂಜಕ 425 ರೂ.ನಿಂದ 810 ರೂ.ಗೆ, ಮೇಣ 58 ರೂ.ನಿಂದ 80 ರೂ.ಗೆ, ಹೊರ ಬಾಕ್ಸ್ ಬೋರ್ಡ್ 36 ರೂ.ನಿಂದ 55 ರೂ.ಗೆ ಮತ್ತು ಒಳ ಪೆಟ್ಟಿಗೆ ಬೋರ್ಡ್ 32 ರೂ.ನಿಂದ 58 ರೂ.ಗೆ ಏರಿಕೆಯಾಗಿದೆ.
ಅಕ್ಟೋಬರ್ 10ರಿಂದ ಪೇಪರ್, ಸ್ಪ್ಲಿಂಟ್ಸ್, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ ಎನ್ನಲಾಗಿದೆ.