ನವದೆಹಲಿ: ಕೊರೊನಾ ಸೋಂಕಿಗೆ ಕಡಿವಾಣ ಹಾಕಲು ರಾಷ್ಟ್ರದಲ್ಲಿ ಕೋವಿಡ್ ಲಸಿಕೆ ಆರಂಭಿಸಿ 9 ತಿಂಗಳುಗಳೇ ಕಳೆದಿವೆ. ಆದರೆ ಇನ್ನೂ ಸುಮಾರು 15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಸಿಕ್ಕಿಲ್ಲ.
ಕೇಂದ್ರ ಸರ್ಕಾರ ಆರೋಗ್ಯ ಕಾರ್ಯಕರ್ತರನ್ನು ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ, ಮೊದಲ ಪ್ರಾತಿನಿಧ್ಯವಾಗಿ ಜನವರಿ ತಿಂಗಳಲ್ಲಿ ಲಸಿಕೆ ನೀಡಲು ಆರಂಭಿಸಿತು. ಈ ಪೈಕಿ ವೈದ್ಯರು, ನರ್ಸ್‌ಗಳು ಮತ್ತು ಅರೆ-ವೈದ್ಯಕೀಯ ಸಿಬ್ಬಂದಿಗಳು ಸೇರಿದ್ದಾರೆ.
ಸೆಪ್ಟೆಂಬರ್ 30ರ ವರೆಗಿನ ಅಂಕಿಅಂಶದ ಪ್ರಕಾರ ಸುಮಾರು ಶೇ 85ರಷ್ಟು ಆರೋಗ್ಯ ಕಾರ್ಯಕರ್ತರಿಗೆ ಎರಡು ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಸೋಂಕು ಹರಡಬಹುದಾದ ಸಂಭವನೀಯ ಸ್ಥಳಗಳಲ್ಲೇ ಕಾರ್ಯ ನಿರ್ವಹಿಸುತ್ತಿರುವ ಇನ್ನೂ 15 ಲಕ್ಷ ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ ಲಸಿಕೆಯ 2ನೇ ಡೋಸ್ ಸಿಕ್ಕಿಲ್ಲ.
ಕೆಲವು ನಿರ್ದಿಷ್ಟ ರಾಜ್ಯಗಳಲ್ಲಿ ಕೋವಿಡ್ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರ ಸಂಖ್ಯೆ ತುಂಬ ಕಡಿಮೆ ಇದೆ. ಕೋವಿನ್ ವ್ಯವಸ್ಥೆಯ ಮೂಲಕ 2ನೇ ಲಸಿಕೆ ಪಡೆಯದ ಆರೋಗ್ಯ ಸಿಬ್ಬಂದಿಯನ್ನು ಗುರುತಿಸಿ, ತುರ್ತಾಗಿ ಲಸಿಕೆ ಲಭಿಸುವಂತೆ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ರಾಜೇಶ್ ಭೂಷಣ್ ಗುರುವಾರ ತಿಳಿಸಿದ್ದಾರೆ.
ಈಗಾಗಲೇ ಶೇ 99ರಷ್ಟು ಆರೋಗ್ಯ ಕಾರ್ಯಕರ್ತರು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಒಟ್ಟಾರೆ ಇನ್ನೂ ಸುಮಾರು 15 ಲಕ್ಷ ವೈದ್ಯಕೀಯ ಸಿಬ್ಬಂದಿ 2ನೇ ಡೋಸ್ ಪಡೆಯಬೇಕಿದೆ. 9 ತಿಂಗಳೇ ಕಳೆದರೂ, ಮೊದಲ ಪ್ರಾಶಸ್ತ್ಯ ಸಿಕ್ಕಿದವರಿಗೆ ಇನ್ನೂ ಪೂರ್ಣ ಪ್ರಮಾಣದ ಲಸಿಕೆ ಸಿಗದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗಿದೆ.
ಒಟ್ಟಾರೆ ಶೇ 69ರಷ್ಟು ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಈ ಪೈಕಿ ಮುಕ್ಕಾಲು ಭಾಗ ಜನ ಎರಡೂ ಡೋಸ್ ಪಡೆದಿದ್ದಾರೆ. ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಮೊದಲ ಡೋಸ್ ಪಡೆದವರ ಪ್ರಮಾಣ ಶೇ 60ಕ್ಕಿಂತ ಕಡಿಮೆ ಇದೆ.
ಜೈಡಸ್ ಕ್ಯಾಡಿಲಾ ಸಂಸ್ಥೆಯು ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ 3 ಡೋಸ್‌ಗಳಿರುವ ಜೈಕೋವ್-ಡಿ ಲಸಿಕೆ ಕುರಿತು ಮಾತನಾಡಿದ ಸಚಿವ ಭೂಷಣ್, ಶೀಘ್ರದಲ್ಲೇ ರಾಷ್ಟ್ರದಾದ್ಯಂತ ಈ ಲಸಿಕೆಯನ್ನು ಪರಿಚಯಿಸಲಾಗುವುದು ಎಂದರು.
ಲಸಿಕೆ ಕುರಿತು ಅಧ್ಯಯನಗಳ ಪುರಾವೆ
ಒಂದು ಸಂದರ್ಭದಲ್ಲಿ ಸಾರ್ಸ್ ಕೋವ್-2ನ ಡೆಲ್ಟಾ ರೂಪಾಂತರಿ ಸೋಂಕಿನಿಂದ ಕೋವಿಡ್-19 ಲಸಿಕೆ ಸುರಕ್ಷತೆ ನೀಡುವ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನು ಒದಗಿಸುವಂತೆ ಕೇಳಲಾಗಿತ್ತು. ಬೆನ್ನಲ್ಲೇ ಹಲವು ಅಧ್ಯಯನ ವರದಿಗಳು ಕೋವಿಡ್ ಲಸಿಕೆಯ 2 ಡೋಸ್‌ಗಳನ್ನು ಪಡೆದುದ್ದರ ಪರಿಣಾಮ ಗಂಭೀರ ರೋಗಗಳಿಂದ ಬಚಾವದವರ ಬಗ್ಗೆ ತಿಳಿಸಿದ್ದವು. ಪ್ರಮುಖವಾಗಿ ಆರೋಗ್ಯ ಕಾರ್ಯಕರ್ತರನ್ನು ಉಲ್ಲೇಖಿಸಿದ್ದವು.