ಶ್ರೀನಗರ: ಪೂಂಚ್ ಮತ್ತು ರಾಜೌರಿ ಜಿಲ್ಲೆಯಲ್ಲಿ ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ 15ನೇ ದಿನಕ್ಕೆ ಕಾಲಿಟ್ಟಿದೆ. 2009ರ ಬಳಿಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ.
ಅಕ್ಟೋಬರ್ 11ರಂದು ಉಗ್ರರು ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಉಗ್ರರು ದಟ್ಟ ಅರಣ್ಯದ ಗುಹೆಗಳಲ್ಲಿ ಅಡಗಿದ್ದು, ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.
ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯ ಜಿಲ್ಲೆಗಳಾದ ಇಲ್ಲಿ ದಟ್ಟವಾದ ಕಾಡಿದೆ. ಎಷ್ಟು ಉಗ್ರರು ಅಡಗಿದ್ದಾರೆ? ಎಂಬ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದರೆ 15 ದಿನಗಳಿಂದ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ.
ಕಾರ್ಯಾಚರಣೆ ಆರಂಭವಾದ ಮೊದಲ ದಿನ ಪೂಂಚ್‌ನ ಸುರನ್‌ಕೋಟ್ ಅರಣ್ಯದಲ್ಲಿ ಐವರು ಹುತಾತ್ಮರಾಗಿದ್ದರು. ಅಕ್ಟೋಬರ್ 14ರಂದು ನಾಲ್ವರು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಸೇನೆಯು ವಿಶೇಷವಾಗಿ ತರಬೇತಿ ಪಡೆದ ಪ್ಯಾರಾ-ಕಾಮಾಂಡೋ ಪಡೆಯನ್ನು ಈ ಸ್ಥಳದಲ್ಲಿ ಕಾರ್ಯಾಚರಣೆಗೆ ನಿಯೋಜನೆ ಮಾಡಿದೆ.
ಉಗ್ರರ ಜೊತೆಗಿನ ಗುಂಡಿನ ದಾಳಿಯಲ್ಲಿ ಒಬ್ಬ ಉಗ್ರನನ್ನು ಸೆರೆ ಹಿಡಿಯಲಾಗಿತ್ತು. ಗುಂಡಿನ ದಾಳಿಯಲ್ಲಿ ಗಾಯಗೊಂಡ ಉಗ್ರನನ್ನು ವಿಚಾರಣೆಗಾಗಿ ಜಮ್ಮುವಿನಿಂದ ಮೆಂಧಾರ್ ಪೊಲೀಸ್ ರಿಮ್ಯಾಂಡ್ ಹೋಮ್‌ಗೆ ಕರೆದುಕೊಂಡು ಹೋಗುವಾಗ ಆತ ಮೃತಪಟ್ಟಿದ್ದ.
ಕಾಡಿನಲ್ಲಿ ಇರುವ ಉಗ್ರರಿಗೆ ಸಹಕಾರ ನೀಡಿದ, ನೀರು ಮತ್ತು ಆಹಾರ ನೀಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿ 12 ಜನರನ್ನು ಬಂಧಿಸಲಾಗಿದ್ದು, ಪೊಲೀಸರು ಅವರ ವಿಚಾರಣೆ ನಡೆಸುತ್ತಿದ್ದಾರೆ.
ಉಗ್ರರ ವಿರುದ್ಧ ಸೇನೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನಲೆಯಲ್ಲಿ ಜಮ್ಮು-ರಾಜೌರಿ ಹೆದ್ದಾರಿಯಲ್ಲಿ 10 ದಿನಗಳಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಉಗ್ರರು ಅಡಗಿರುವ ಪ್ರದೇಶಕ್ಕೆ ಬೇರೆ-ಬೇರೆ ಸ್ಥಳಗಳಿಂದ ಹೆಚ್ಚುವರಿ ಪಡೆಯನ್ನು ರವಾನೆ ಮಾಡಲಾಗಿದೆ.
2021ರ ಜೂನ್ ಬಳಿಕ ರಾಜೌರಿ ಮತ್ತು ಪೂಂಚ್ ಪ್ರದೇಶದಲ್ಲಿ ಉಗ್ರರ ಒಳನುಸುಳುವಿಕೆ ಹೆಚ್ಚಾಗಿದೆ. ಜೂನ್‌ನಿಂದ ಇಲ್ಲಿಯ ತನಕ ಈ ಪ್ರದೇಶಗಳಲ್ಲಿ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ 9 ಉಗ್ರರನ್ನು ಹತ್ಯೆ ಮಾಡಲಾಗಿದೆ.
ಸುರನ್‌ಕೋಟ್ ಅರಣ್ಯ, ಮೆಂಧಾರ್ ಜೊತೆ ರಾಜೌರಿ ಜಿಲ್ಲೆಯ ಥಾನಮಂಡಿ ಅರಣ್ಯದಲ್ಲಿಯೂ ಕಾರ್ಯಾಚರಣೆ ಮುಂದುವರೆದಿದ್ದು, ಉಗ್ರರಿಗಾಗಿ ನಿರಂತರವಾಗಿ ಶೋಧ ನಡೆಸಲಾಗುತ್ತಿದೆ. ಉಗ್ರರು ಅರಣ್ಯದಿಂದ ಹೊರ ಹೋಗಂದತೆ ಡ್ರೋಣ್ ಮೂಲಕ ಕಣ್ಗಾವಲು ಇಡಲಾಗಿದೆ.
ಬಹುದೊಡ್ಡ ಕಾರ್ಯಾಚರಣೆ ಉಗ್ರರು ಮತ್ತು ಯೋಧರ ನಡುವೆ ಪೂಂಚ್‌ನಲ್ಲಿ ನಡೆಯುತ್ತಿರುವ 2ನೇ ಅತಿ ದೊಡ್ಡ ಕಾರ್ಯಾಚರಣೆ ಇದಾಗಿದೆ. 2009ರಲ್ಲಿ ಜನವರಿ 1 ರಿಂದ 9ರ ತನಕ ಉಗ್ರರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬರು ಜೆಓಸಿ ಸೇರಿದಂತೆ ನಾಲ್ವರು ಯೋಧರು ಹುತಾತ್ಮರಾಗಿದ್ದರು. ನಾಲ್ವರು ಉಗ್ರರು ಮೃತಪಟ್ಟಿದ್ದಾರೆ ಎಂಬ ಮಾಹಿತಿ ಸಿಕ್ಕಿತ್ತು. ಆದರೆ ಯಾವುದೇ ಮೃತದೇಹ ಪತ್ತೆಯಾಗಿರಲಿಲ್ಲ.
ಈಗ ನಡೆಯುತ್ತಿರುವ ಕಾರ್ಯಾಚರಣೆ ಸೋಮವಾರಕ್ಕೆ 15ನೇ ದಿನಕ್ಕೆ ಕಾಲಿಟ್ಟಿದೆ. ಉಗ್ರರು ಸುಮಾರು 2 ತಿಂಗಳಿನಿಂದ ಈ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ಶಂಕಿಸಲಾಗಿದೆ. ಆಗಸ್ಟ್‌ನಲ್ಲಿ ಪೂಂಚ್ ವಲಯದಲ್ಲಿ ಹಲವಾರು ಉಗ್ರರ ದಾಳಿ ಪ್ರಕರಣಗಳು ನಡೆದಿದ್ದವು. ಈ ದಾಳಿಯಲ್ಲಿ ಇಲ್ಲಿ ಅಡಗಿರುವ ಉಗ್ರರು ಭಾಗಿಯಾಗಿದ್ದಾರೆ ಎಂಬ ಶಂಕೆ ಇದೆ.
ಒಂದು ಕಡೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದು ಕಡೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರ ಪ್ರವಾಸದಲ್ಲಿದ್ದಾರೆ. 370ನೇ ವಿಧಿ ರದ್ದುಗೊಳಿಸಿದ ಬಳಿಕ ಮೊದಲ ಬಾರಿಗೆ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಭಾನುವಾರ ಜಮ್ಮುವಿಗೆ ಅವರು ಭೇಟಿ ಕೊಟ್ಟಿದ್ದರು. ವಿವಿಧ ಕಾರ್ಯಕ್ರಮಗಳಲ್ಲಿ ಅಮಿತ್ ಶಾ ಪಾಲ್ಗೊಂಡಿದ್ದು, ಸೈನಿಕರ ಜೊತೆ ಭೋಜನವನ್ನು ಸಹ ಸವಿದಿದ್ದಾರೆ. ಅಮಿತ್ ಶಾ ಭೇಟಿ ಹಿನ್ನಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.