ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ದೇಶಾದ್ಯಂತ 166 ಸ್ವತಂತ್ರ ಆಧಾರ್ ದಾಖಲಾತಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ ಎಂದು ಅಧಿಕೃತ ಪ್ರಕಟಣೆ ಶನಿವಾರ ತಿಳಿಸಿದೆ.
ಪ್ರಸ್ತುತ, 166 ಯೋಜಿತ ಕೇಂದ್ರಗಳಲ್ಲಿ 55 ಆಧಾರ್ ಸೇವಾ ಕೇಂದ್ರಗಳು(ಎಎಸ್‌ಕೆಗಳು) ಕಾರ್ಯನಿರ್ವಹಿಸುತ್ತಿದ್ದು, ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಜ್ಯ ಸರ್ಕಾರಗಳು ನಡೆಸುತ್ತಿರುವ ಸುಮಾರು 52,000 ಆಧಾರ್ ದಾಖಲಾತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
"ಯುಐಡಿಎಐ ದೇಶದ 122 ನಗರಗಳಲ್ಲಿ 166 ಆಧಾರ್ ನೋಂದಣಿ ಮತ್ತು ನವೀಕರಣ ಕೇಂದ್ರಗಳನ್ನು ತೆರೆಯಲು ಯೋಜಿಸಿದೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಎಸ್‌ಕೆಗಳು ವಾರದ ಎಲ್ಲಾ ದಿನಗಳಲ್ಲಿ ತೆರೆದಿರುತ್ತವೆ ಮತ್ತು ಇದುವರೆಗೆ ದಿವ್ಯಾಂಗ್ ವ್ಯಕ್ತಿಗಳು ಸೇರಿದಂತೆ 70 ಲಕ್ಷಕ್ಕೂ ಹೆಚ್ಚು ನಿವಾಸಿಗಳಿಗೆ ಆಧಾರ್ ಕಾರ್ಡ್ ಪೂರೈಸಲಾಗಿದೆ.
ಮಾಡೆಲ್-ಎ ಎಎಸ್‌ಕೆಗಳಿಗೆ ದಿನಕ್ಕೆ 1,000 ದಾಖಲಾತಿಗಳನ್ನು ಮತ್ತು ಅಪ್‌ಡೇಟ್ ಮನವಿಗಳನ್ನು ನಿರ್ವಹಿಸುವ ಸಾಮರ್ಥ್ಯ ಇದೆ, ಮಾದರಿ ಬಿ ಎಎಸ್‌ಕೆಗಳಿಗೆ ದಿನಕ್ಕೆ 500 ದಾಖಲಾತಿಗಳು ಮತ್ತು ಅಪ್‌ಡೇಟ್ ಮನವಿಗಳನ್ನು ಮತ್ತು ಮಾಡೆಲ್ ಸಿ ಎಎಸ್‌ಕೆಗಳಿಗೆ ದಿನಕ್ಕೆ 250 ದಾಖಲಾತಿಗಳನ್ನು ಮತ್ತು ಅಪ್‌ಡೇಟ್ ಮನವಿಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ ಎಂದು ಯುಐಡಿಎಐ ತಿಳಿಸಿದೆ.