ತಿರುವನಂತಪುರಂ: ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದರ ಪರಿಣಾಮದಿಂದ ಅಕ್ಟೋಬರ್ 17ರ ತನಕ ಕೇರಳದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಲಕ್ಷದ್ವೀಪದ ಆಗ್ನೇಯ ಭಾಗದಲ್ಲಿ ಮತ್ತು ಬಂಗಳಾಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದೆ. ಇದು ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 14ರಂದು ಕೇರಳದಲ್ಲಿ ಭಾರೀ ಮಳೆಯಾಗಲಿದೆ, ಅಕ್ಟೋಬರ್ 17ರ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯುಭಾರ ಕುಸಿತವು ಆಂಧ್ರ ಪ್ರದೇಶದ ಕಡೆ ಸಾಗಲಿದ್ದು, ಆಂಧ್ರ ಪ್ರದೇಶ ಮತ್ತು ಓಡಿಶಾ ಕರಾವಳಿಯಲ್ಲಿ ಮಂದಿನ 24 ಗಂಟೆಯಲ್ಲಿ ಮಳೆಯಾಗಬಹುದು ಎಂದು ಅಂದಾಜಿಸಲಾಗಿದೆ. ಕೇರಳದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ಕೊಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆ ಮುನ್ಸೂಚನೆ ನೀಡಿರುವುದರಿಂದ ಬೆಟ್ಟ ಪ್ರದೇಶದಲ್ಲಿ ರಾತ್ರಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಮಳೆಯಿಂದ ಹಾನಿಯಾದರೆ ಕಾರ್ಯಾಚರಣೆಗಾಗಿ 6 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಚಂಡಮಾರುತದ ಪರಿಸ್ಥಿತಿ ಇನ್ನೂ ಎರಡು ದಿನ ಮುಂದುವರೆಯಲಿದೆ. ಇದರ ಪ್ರಭಾವದಿಂದ ಕೇರಳದಲ್ಲಿ ಮಳೆ ಅಕ್ಟೋಬರ್ 17ರ ತನಕ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಕೇರಳ ಸರ್ಕಾರ ಘಟ್ಟ ಪ್ರದೇಶಗಳಲ್ಲಿ ಸಂಜೆ 7 ರಿಂದ ಬೆಳಗ್ಗೆ 7 ಗಂಟೆಯ ತನಕ ಪ್ರಯಾಣ ನಿರ್ಬಂಧಿಸಿದೆ.
ಎಲ್ಲಾ ಜಿಲ್ಲೆಗಳಲ್ಲಿ ಎಚ್ಚರದಿಂದ ಇರಲು ಕೇರಳ ಸರ್ಕಾರ ಸೂಚನೆ ನೀಡಿದೆ. ಹವಾಮಾನ ಇಲಾಖೆ ತಿರುವನಂತಪುರಂ ಸೇರಿದಂತೆ 13 ಜಿಲ್ಲೆಗಳಲ್ಲಿ ಮಳೆಯ ಎಚ್ಚರಿಕೆಯನ್ನು ನೀಡಿದೆ. 6 ಎನ್‌ಡಿಆರ್‌ಎಫ್ ತಂಡದ ಜೊತೆ ವಿವಿಧ ಇಲಾಖೆಗಳ ತಂಡಗಳು ಸಹ ಸನ್ನದ್ಧವಾಗಿರುವಂತೆ ಸೂಚನೆ ಕೊಡಲಾಗಿದೆ.
ಸರ್ಕಾರ ಈಗಾಗಲೇ 27 ಕಾಳಜಿ ಕೇಂದ್ರಗಳನ್ನು ಆರಂಭಿಸಿದೆ. ಹೆಚ್ಚು ಮಳೆ ಬೀಳುವ ಪ್ರದೇಶ ಎಂದು ಗುರುತಿಸಲಾದ ಸ್ಥಳಗಳಿಂದ 622 ಜನರನ್ನು ಈಗಾಗಲೇ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ನದಿಗಳ ನೀರಿನ ಮಟ್ಟವೂ ಹೆಚ್ಚಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುವಂತೆ ನಿರ್ದೇಶನ ನೀಡಲಾಗಿದೆ.
ಕೇರಳ ರಾಜ್ಯದ ಕೊಯಿಕ್ಕೋಡ್, ಪಾಲಕ್ಕಾಡ್, ಮಲಪ್ಪುರಂ, ವಯನಾಡು ಪ್ರದೇಶದಲ್ಲಿ ಅಕ್ಟೋಬರ್ 15ರ ತನಕ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಹೆಚ್ಚು ಮಳೆ ಬೀಳುವ ಪ್ರದೇಶಗಳನ್ನು ಪಟ್ಟಿ ಮಾಡಿದ್ದು, ಆರೆಂಜ್ ಮತ್ತು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.