ಜಿನೆವಾ: ವಿಶ್ವದಲ್ಲಿರುವ ಸುಮಾರು 13.5 ಕೋಟಿ ಆರೋಗ್ಯ ಕಾರ್ಯಕರ್ತರಲ್ಲಿ ಸುಮಾರು 1.8 ಲಕ್ಷ ಕಾರ್ಯಕರ್ತರು 2020ರ ಜನವರಿಯಿಂದ 2021ರ ಮೇ ತಿಂಗಳಿನವರೆಗಿನ ಅವಧಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ವಿಶ್ವಆರೋಗ್ಯ ಸಂಸ್ಥೆ ಗುರುವಾರ ಹೇಳಿದೆ.
ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆಯ ಮೇಲೆ ಲಸಿಕೆ ನೀಡಬೇಕಾಗಿದೆ. 119 ದೇಶಗಳಿಂದ ಲಭಿಸಿದ ಅಂಕಿಅಂಶದ ಪ್ರಕಾರ, ವಿಶ್ವದಲ್ಲಿ ಸರಾಸರಿ 5 ಆರೋಗ್ಯಕಾರ್ಯಕರ್ತರಲ್ಲಿ ಇಬ್ಬರಿಗೆ ಕೊರೋನ ವಿರುದ್ಧದ ಸಂಪೂರ್ಣ ಲಸಿಕೆ ನೀಡಲಾಗಿದೆ. ಆದರೆ ಪ್ರದೇಶಗಳು ಹಾಗೂ ಆರ್ಥಿಕ ಗುಂಪುಗಳಲ್ಲಿನ ದೊಡ್ಡ ವ್ಯತ್ಯಾಸವನ್ನು ಈ ಸರಾಸರಿಯಲ್ಲಿ ಗಮನಿಸಲಾಗಿಲ್ಲ .
ಮಿಲಿಯಾಂತರ ಆರೋಗ್ಯ ಕಾರ್ಯಕರ್ತರು ಇನ್ನೂ ಲಸಿಕೆ ಪಡೆಯದಿರುವುದು ರಾಷ್ಟ್ರೀಯ ಸರಕಾರಗಳ ಅಥವಾ ಜಾಗತಿಕ ಲಸಿಕೆ ಪೂರೈಕೆಯನ್ನು ನಿಯಂತ್ರಿಸುವ ಸಂಸ್ಥೆಗಳ ಕಳಪೆ ನಿರ್ವಹಣೆಯನ್ನು ಸೂಚಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್ ಅಧನಾಮ್ ಘೆಬ್ರೆಯೇಸಸ್ ಹೇಳಿದ್ದಾರೆ.
2021ರ ಅಂತ್ಯದೊಳಗೆ, ಎಲ್ಲಾ ದೇಶಗಳೂ ತನ್ನ ಜನಸಂಖ್ಯೆಯ ಕನಿಷ್ಟ 40% ಜನರಿಗೆ ಲಸಿಕೆ ಹಾಕಿಸುವ ಗುರಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿಗೊಳಿಸಿದೆ. ಆದರೆ, ಸೂಕ್ತ ಪ್ರಮಾಣದ ಲಸಿಕೆ ಪೂರೈಕೆಯಾಗದೆ 82 ದೇಶಗಳು ಈ ಗುರಿಯಿಂದ ದೂರ ಸಾಧಿಸಲು ವಿಫಲವಾಗಬಹುದು ಎಂದು ವಿಶ್ವಸಂಸ್ಥೆ ಹೇಳಿದೆ.
ಕಳೆದ ವರ್ಷದ ಜನವರಿಯಿಂದ ಇದುವರೆಗೆ ಜಾಗತಿಕವಾಗಿ 24.24 ಕೋಟಿಗೂ ಅಧಿಕ ಮಂದಿ ಕೊರೋನ ಸೋಂಕಿಗೆ ಒಳಗಾಗಿದ್ದು 49.29 ಲಕ್ಷಕ್ಕೂ ಅಧಿಕ ಮಂದಿ ಮೃತರಾಗಿದ್ದಾರೆ. ವಿಶ್ವದಾದ್ಯಂತ ಇದುವರೆಗೆ 673 ಕೋಟಿ ಡೋಸ್ನಷ್ಟು ಲಸಿಕೆ ನೀಡಲಾಗಿದೆ ಎಂದು ಜಾನ್ಸ್ ಹಾಪ್ಕಿನ್ಸ್ ವಿವಿಯ ವರದಿ ಹೇಳಿದೆ.
ಬಾಕ್ಸ್: 2022ರಲ್ಲೂ ಕೊರೋನದ ಆತಂಕ ಮುಂದುವರಿಯುವ ಸಾಧ್ಯತೆ
ಬಡ ದೇಶಗಳಿಗೆ ಲಸಿಕೆ ಲಭ್ಯವಾಗದ ಹಿನ್ನೆಲೆಯಲ್ಲಿ ವಿಶ್ವದಲ್ಲಿ ಕೊರೋನ ಸೋಂಕಿನ ಸಮಸ್ಯೆ 2022ರಲ್ಲೂ ಮುಂದುವರಿಯುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಆಫ್ರಿಕಾದ ಜನಸಂಖ್ಯೆಯ ಕೇವಲ 5% ಜನತೆ ಮಾತ್ರ ಇದುವರೆಗೆ ಲಸಿಕೆ ಪಡೆದಿದ್ದಾರೆ. ಆಫ್ರಿಕಾದಂತಹ ಬಡ ದೇಶಗಳಲ್ಲಿ 10 ಆರೋಗ್ಯ ಕಾರ್ಯಕರ್ತರಲ್ಲಿ ಒಬ್ಬರು ಮಾತ್ರ ಲಸಿಕೆ ಪಡೆದಿದ್ದಾರೆ. ಆದರೆ ಶ್ರೀಮಂತ ರಾಷ್ಟ್ರಗಳಲ್ಲಿ 80% ಆರೋಗ್ಯ ಕಾರ್ಯಕರ್ತರು ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.