ನವದೆಹಲಿ :ಕೋವಿಡ್-19 ಬಾಧಿತ ವರ್ಷದಲ್ಲಿ ಧನಾತ್ಮಕ ಬೆಳವಣಿಗೆಯೊಂದಿಗೆ ಕೃಷಿ ಕ್ಷೇತ್ರ ದೇಶದ ಆರ್ಥಿಕತೆಗೆ ಒಂದಷ್ಟು ಕೊಡುಗೆ ನೀಡಿರಬಹುದು; ಆದರೆ 2020ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ಶೇಕಡ 18ರಷ್ಟು ಅಧಿಕ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ.
ದೇಶದಲ್ಲೇ ಅತ್ಯಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ರಾಜ್ಯ ಮಹಾರಾಷ್ಟ್ರ. ಇಲ್ಲಿ 4,006 ರೈತರು ಆತ್ಮಹತ್ಯೆಗೆ ಶರಣಾಗಿದ್ದರೆ ಕರ್ನಾಟಕ (2016) ಎರಡನೇ ಸ್ಥಾನದಲ್ಲಿದೆ. ಆಂಧ್ರ ಪ್ರದೇಶ (889), ಮಧ್ಯಪ್ರದೇಶ (735) ಮತ್ತ ಛತ್ತೀಸ್‌ಗಢ (537) ನಂತರದ ಸ್ಥಾನಗಳಲ್ಲಿವೆ. 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 10,667. 2019ರ ಪಟ್ಟಿಯಲ್ಲಿ ಕೂಡಾ ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಮಧ್ಯಪ್ರದೇಶ ಮೊದಲ ನಾಲ್ಕು ಸ್ಥಾನಗಳಲ್ಲಿದ್ದವು.
ಕೃಷಿ ಕೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಿರುವುದನ್ನು, ಭೂರಹಿತ ಕೃಷಿ ಕಾರ್ಮಿಕರಲ್ಲಿ ಹತಾಶೆ ಹೆಚ್ಚಿದೆ ಎಂದು ವಿಶ್ಲೇಷಿಸಬಹುದಾಗಿದೆ. ಈ ವರ್ಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ನೆರವಿಗೂ ಅರ್ಹವಾಗಿಲ್ಲ. ಬಹುತೇಕ ಭೂರಹಿತ ಕೃಷಿಕರು ಸ್ವಂತ ಭೂಮಿ ಇಲ್ಲದೇ ಜಮೀನನ್ನು ಭೋಗ್ಯಕ್ಕೆ ಪಡೆದು ಕೃಷಿ ಮಾಡುತ್ತಿದ್ದಾರೆ.
ದೇಶದಲ್ಲಿ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ 1,53,952 ಮಂದಿಯ ಪೈಕಿ ಶೇಕಡ 7ರಷ್ಟು ಅಂದರೆ 10,667 ರೈತರು. ಈ ಪೈಕಿ 5,579 ಕೃಷಿಕರು ಮತ್ತು 5,098 ಮಂದಿ ಕೃಷಿ ಕಾರ್ಮಿಕರು ಸೇರಿದ್ದಾರೆ ಎಂದು ಗುರುವಾರ ಬಿಡುಗಡೆ ಮಾಡಿದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ದಾಖಲೆಗಳಿಂದ ತಿಳಿದುಬರುತ್ತದೆ. ಹಿಂದಿನ ಮೂರು ವರ್ಷಗಳಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆಯಾದ ಬಳಿಕ 2020ರಲ್ಲಿ ಹೆಚ್ಚಳವಾಗಿದೆ. 2016ರಲ್ಲಿ 11,379, 2017ರಲ್ಲಿ 10,665, 2018ರಲ್ಲಿ 10,349 ಮತ್ತು 2019ರಲ್ಲಿ 10,281 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು.