ತಿರುವನಂತಪುರಂ: ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದಿಂದಾಗಿ ಕೇರದಳಲ್ಲಿ 41 ಮಂದಿ ಗರ್ಭಿಣಿಯರು ಸಾವನ್ನಪ್ಪಿದ್ದಾರೆ ಎಂದು ಕೇರಳ ಸರ್ಕಾರ ಹೇಳಿದೆ.
ಈ ಬಗ್ಗೆ ಕೇರಳ ಆರೋಗ್ಯ ಸಚಿವ ವೀಣಾ ಜಾರ್ಜ್ ಬುಧವಾರ ಮಾಹಿತಿ ನೀಡಿದ್ದು, 'ಮಾರ್ಚ್ 2020 ರಿಂದ ಕೇರಳದಲ್ಲಿ ಇದುವರೆಗೆ 41 ಗರ್ಭಿಣಿಯರು ಕೋವಿಡ್-19 ಗೆ ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, 'ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಸಂಖ್ಯೆ 149 ರಷ್ಟಿದೆ. ಅಂತೆಯೇ ಕೇರಳ ರಾಜ್ಯ ಆರೋಗ್ಯ ಇಲಾಖೆಯು ಇತ್ತೀಚೆಗೆ ನಡೆಸಿದ ಸಿರೊ ಪ್ರೆವೆಲೆನ್ಸ್ ವೈಜ್ಞಾನಿಕ ಅಧ್ಯಯನದ ಸಂಶೋಧನೆಗಳು ಮತ್ತು ಐಸಿಎಂಆರ್‌ನ ಇದೇ ರೀತಿಯ ಸಮೀಕ್ಷೆಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ತೋರುತ್ತದೆ ಎಂದು ಮಾಹಿತಿ ನೀಡಿದರು.
ಕೇರಳದಲ್ಲಿ ನಿನ್ನೆ ಮತ್ತೆ 7ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ನಿನ್ನೆ ಒಂದೇ ದಿನ 482 ಮಂದಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಆ ಮೂಲಕ ಕೇರದಳಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 49,19,952ಕ್ಕೆ ಏರಿಕೆಯಾಗಿದ್ದು, ಕೋವಿಡ್ ನಿಂದಾಗಿ ಬಲಿಯಾದವರ ಸಂಖ್ಯೆ 29,355ಕ್ಕೆ ಏರಿಕೆಯಾಗಿದೆ.
ನಿನ್ನೆ ವರದಿಯಾದ 482 ಮಂದಿ ಸಾವಿನ ಪೈಕಿ 90 ಸಾವು ನಿನ್ನೆ ವರದಿಯಾಗಿದ್ದು, ಬಾಕಿ 341 ಸಾವುಗಳ ತಾಂತ್ರಿಕ ಕಾರಣಗಳಿಂದ ಜೂನ್ 18 ರಿಂದ ದಾಖಲಾಗದೇ ಉಳಿದಿದ್ದ ಸಾವಿನ ಪ್ರಕರಣಗಳಾಗಿವೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.