ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಜನರನ್ನು ಸಾವಿನ ಸುಳಿಯಿಂದ ರಕ್ಷಿಸುವಲ್ಲಿ ಕೋವಿಡ್-19 ಲಸಿಕೆಗಳು ಬಹುಮುಖ್ಯ ಪಾತ್ರ ವಹಿಸಿವೆ ಎಂಬುದನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ-ಅಂಶಗಳು ಸ್ಪಷ್ಟವಾಗಿ ಉಲ್ಲೇಖಿಸುತ್ತಿವೆ.
ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಆರಂಭಿಕ ಏಳು ವಾರಗಳ ಅಂಕಿ-ಅಂಶಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದೆ. ಆ ಪ್ರಕಾರ, ಒಂದು ವಾರದ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟರ ಪೈಕಿ ಲಸಿಕೆ ಪಡೆದುಕೊಳ್ಳದ ಪ್ರತಿ 10 ಲಕ್ಷ ಜನರಲ್ಲಿ 121 ಜನರು ಪ್ರಾಣ ಬಿಟ್ಟಿದ್ದಾರೆ. ಅದೇ ಅವಧಿಯಲ್ಲಿ ಒಂದು ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 2.6ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 1.76ರಷ್ಟಿದೆ.
ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ ಮತ್ತು ಪರಿಣಾಮವನ್ನು ಸಾರುವ ಟ್ರ್ಯಾಕರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದು, ಅದರಲ್ಲಿ ಈ ಬಗ್ಗೆ ಉಲ್ಲೇಖಿಸಲಾಗುತ್ತದೆ. ವೈದ್ಯಕೀಯ ತಜ್ಞರ ಪ್ರಕಾರ ಮುಂಬರುವ ಅಕ್ಟೋಬರ್ ತಿಂಗಳು ಹಬ್ಬಗಳ ಸಂಖ್ಯೆ ಹೆಚ್ಚಾಗಿದ್ದು, ಸೋಂಕಿನ ಹರಡುವಿಕೆ ಪ್ರಮಾಣ ಏರಿಕೆಯಾಗುವ ಅಪಾಯವಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಲಸಿಕೆ ಮತ್ತು ಸೋಂಕು ಹರಡುವಿಕೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಅದರಲ್ಲೂ ಒಂದೂ ಡೋಸ್ ಲಸಿಕೆ ಪಡೆದುಕೊಳ್ಳದ 60 ವರ್ಷ ಮೇಲ್ಪಟ್ಟ ವರ್ಗಕ್ಕೆ ಇದರಿಂದ ಹೆಚ್ಚು ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ದೇಶದಲ್ಲಿ ಶೇ.7.5ರಷ್ಟು ಸಾವಿನ ಪ್ರಮಾಣ ಇಳಿಮುಖಕಳೆದ ಸೆಪ್ಟೆಂಬರ್ 9ರ ಅವಧಿಗೆ ಸಂಬಂಧಿಸಿದಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ವಾಸ್ತವಿಕ ಅಂಕಿ-ಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ದತ್ತಾಂಶಗಳಿಂದ ಕೊವಿಡ್-19 ಲಸಿಕೆಯ ಪರಿಣಾಮಕಾರಿತ್ವ ಹಾಗೂ ರೋಗದ ತೀವ್ರತೆ ಹೆಚ್ಚಿಸುವುದು ಹಾಗೂ ಸಾವಿನ ಅಪಾಯವನ್ನು ತಗ್ಗಿಸಿರುವುದು ಗೊತ್ತಾಗುತ್ತದೆ. ಏಪ್ರಿಲ್ 18 ರಿಂದ ಆಗಸ್ಟ್ 15ರ ನಾಲ್ಕು ತಿಂಗಳ ಅವಧಿಯಲ್ಲಿ ಮೊದಲ ಡೋಸ್ ಪಡೆದುಕೊಂಡ ಶೇ.96.6 ಹಾಗೂ ಎರಡೂ ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಶೇ.97.5ರಷ್ಟು ಸಾವಿನ ಪ್ರಮಾಣ ಮತ್ತು ರೋಗದ ತೀವ್ರತೆ ಇಳಿಮುಖವಾಗಿದೆ. ಈ ನಾಲ್ಕು ತಿಂಗಳಿನಲ್ಲಿ ಒಟ್ಟು 2,52,873 ಜನರು ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ ಎಂಬುದು ಅಂಕಿ-ಅಂಶಗಳಲ್ಲಿ ಉಲ್ಲೇಖಿಸಲಾಗಿದೆ.
ಲಸಿಕೆ ಹಾಕಿಸಿಕೊಳ್ಳದವರ ಸಾವಿನ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಸಂದರ್ಭದಲ್ಲಿ ಲಸಿಕೆ ಪಡೆದುಕೊಂಡವರು ಮತ್ತು ಲಸಿಕೆ ಪಡೆಯದವರ ನಡುವಿನ ಸಾವಿನ ಪ್ರಮಾಣದಲ್ಲಿ ಅಜಗಜಾಂತರ ವ್ಯತ್ಯಾಸ ಇರುವ ಬಗ್ಗೆ ವಿಶ್ಲೇಷಕರು ಉಲ್ಲೇಖಿಸಿದ್ದಾರೆ.
* ಕಳೆದ ಏಪ್ರಿಲ್ 18 ಮತ್ತು ಮೇ 30ರ ನಡುವೆ ಒಂದು ವಾರದ ಅವಧಿಯಲ್ಲಿ 60 ವರ್ಷ ಮೇಲ್ಪಟ್ಟವರ ಪೈಕಿ ಲಸಿಕೆ ಪಡೆದುಕೊಳ್ಳದ ಪ್ರತಿ 10 ಲಕ್ಷ ಜನರಲ್ಲಿ 121 ಜನರು ಪ್ರಾಣ ಬಿಟ್ಟಿದ್ದಾರೆ. ಅದೇ ಅವಧಿಯಲ್ಲಿ ಒಂದು ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 2.6ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 1.76ರಷ್ಟಿದೆ.
* ಇನ್ನು ಮೇಲೆ ಉಲ್ಲೇಖಿಸಿದ ಅವಧಿಯಲ್ಲಿ ಲಸಿಕೆ ಪಡೆದುಕೊಳ್ಳದ 45 ರಿಂದ 59 ವಯೋಮಾನದವರ ಸಾವಿನ ಸರಾಸರಿ ಪ್ರಮಾಣ 39.90ರಷ್ಟಿದೆ. ಮೊದಲ ಡೋಸ್ ಪಡೆದುಕೊಂಡರಲ್ಲಿ ಸಾವಿನ ಪ್ರಮಾಣ 0.87ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಸಾವಿನ ಸರಾಸರಿ ಪ್ರಮಾಣ 0.42ರಷ್ಟಿದೆ.
* 18 ರಿಂದ 44 ವಯೋಮಾನದವರಲ್ಲಿ ಲಸಿಕೆಯು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ನಾಲ್ಕು ತಿಂಗಳ ಅಂಕಿ-ಅಂಶಗಳಲ್ಲಿ ಒಂದು ವಾರದ ಅವಧಿಯಲ್ಲಿ ಪ್ರತಿ 10 ಲಕ್ಷ ಜನರ ಪೈಕಿ ಲಸಿಕೆ ಪಡೆದುಕೊಳ್ಳದ 5.6 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಮೊದಲ ಡೋಸ್ ಪಡೆದವರದಲ್ಲಿ ಈ ಸಾವಿನ ಸರಾಸರಿ ಪ್ರಮಾಣ 0.6ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸರಾಸರಿ ಪ್ರಮಾಣ 0.1ರಷ್ಟಿದೆ.
ಭಾರತವೇ ಕೊವಿಡ್-19 ಲಸಿಕೆ ಕೊರತೆ ಎದುರಿಸಿದ ಕಾಲ!
ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯು ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದ ಆ ಸಂದರ್ಭದಲ್ಲಿ ಇಡೀ ದೇಶವೇ ಲಸಿಕೆ ಅಭಾವವನ್ನು ಎದುರಿಸುತ್ತಿತ್ತು. ದೇಶದ ಅರ್ಹ ಫಲಾನುಭವಿನಗಳ ಪೈಕಿ ಶೇ.13ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆಯನ್ನು ಮಾತ್ರ ವಿತರಣೆ ಮಾಡಲಾಗಿತ್ತು. ಜೂನ್ ತಿಂಗಳ ನಂತರವೇ ದೇಶದಲ್ಲಿ ಲಸಿಕೆ ವಿತರಣೆಯು ವೇಗ ಪಡೆದುಕೊಂಡಿತು. ಜೂನ್ 6ರ ವೇಳೆಗೆ ಶೇ.15ರಷ್ಟಿದ್ದ ಲಸಿಕೆ ವಿತರಣೆ ಪ್ರಮಾಣವು ಆಗಸ್ಟ್ 15ರ ಹೊತ್ತಿಗೆ ಶೇ.32ಕ್ಕೆ ಏರಿಕೆಯಾಗಿತ್ತು. ಈ ವೇಳೆಗೆ ದೇಶದಲ್ಲಿ ಕೊವಿಡ್-19 ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆಯು ಇಳಿಮುಖವಾಗಿತ್ತು. ಅಂದರೆ ಮೊದಲ ಡೋಸ್ ಲಸಿಕೆ ಪಡೆದುಕೊಂಡವರಿಗೆ ಲಸಿಕೆಯು ಸಾವಿನಿಂದ ಬಹುಪಾಲು ರಕ್ಷಣೆ ಒದಗಿಸಿತ್ತು ಎಂದು ವಿಶ್ಲೇಷಕರು ಉಲ್ಲೇಖಿಸಿದ್ದಾರೆ.
ನಾಲ್ಕು ತಿಂಗಳ ಅವಧಿ ಬಳಿಕ ಬದಲಾದ ಭಾರತದ ಚಿತ್ರಣ
* ಜೂನ್ 6 ಮತ್ತು ಆಗಸ್ಟ್ 15ರ ಅವಧಿಯಲ್ಲಿ ಲಸಿಕೆ ಪಡೆದುಕೊಳ್ಳದ 60 ವರ್ಷ ಮೇಲ್ಪಟ್ಟ ವಯೋಮಾನದ ಪ್ರತಿ 10 ಲಕ್ಷ ಜನರಲ್ಲಿ ಸರಾಸರಿ 30.04 ಮಂದಿ ಪ್ರಾಣ ಬಿಟ್ಟಿದ್ದಾರೆ. ಅದೇ ಅವಧಿಯಲ್ಲಿ ಒಂದು ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 0.46ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದವರ ಸಾವಿನ ಪ್ರಮಾಣ 0.33ರಷ್ಟಿದೆ.
* ಇನ್ನು ಅದೇ ಅವಧಿಯಲ್ಲಿ 45 ರಿಂದ 59 ವಯೋಮಾನದವರ ಸಾವಿನ ಸರಾಸರಿ ಪ್ರಮಾಣ 8.41ರಷ್ಟಿದೆ. ಮೊದಲ ಡೋಸ್ ಪಡೆದುಕೊಂಡರಲ್ಲಿ ಸಾವಿನ ಪ್ರಮಾಣ 0.11ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಸಾವಿನ ಸರಾಸರಿ ಪ್ರಮಾಣ 0.10ರಷ್ಟಿದೆ.
* 18 ರಿಂದ 44 ವಯೋಮಾನದವರಲ್ಲಿ ಲಸಿಕೆಯು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ. ನಾಲ್ಕು ತಿಂಗಳ ಅಂಕಿ-ಅಂಶಗಳಲ್ಲಿ ಒಂದು ವಾರದ ಅವಧಿಯಲ್ಲಿ ಪ್ರತಿ 10 ಲಕ್ಷ ಜನರ ಪೈಕಿ ಲಸಿಕೆ ಪಡೆದುಕೊಳ್ಳದ 1.08 ಮಂದಿ ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಮೊದಲ ಡೋಸ್ ಪಡೆದವರದಲ್ಲಿ ಈ ಸಾವಿನ ಸರಾಸರಿ ಪ್ರಮಾಣ 0.02ರಷ್ಟಿದ್ದರೆ, ಎರಡೂ ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸರಾಸರಿ ಪ್ರಮಾಣ 0.06ರಷ್ಟಿದೆ.
ಕೊರೊನಾವೈರಸ್ ಲಸಿಕೆ ವಿತರಣೆ ಪ್ರಮಾಣ ಎಷ್ಟಿದೆ?
ಭಾರತದಲ್ಲಿ ಕಳೆದ ಬುಧವಾರ ರಾತ್ರಿ 7 ಗಂಟೆ ವೇಳೆಗೆ 59,48,118 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 257 ದಿನಗಳಾಗಿದ್ದು, 88.28 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಭಾರತದಲ್ಲಿ ಈವರೆಗೂ 88,28,81,552 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದ್ದು, ದೇಶದಲ್ಲಿ ಇದುವರೆಗೂ 64,61,13,909 ಮಂದಿಗೆ ಮೊದಲ ಡೋಸ್ ಹಾಗೂ 23,67,67,643 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ದೇಶದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈವರೆಗೂ 85,42,35,155 ಡೋಸ್ ಲಸಿಕೆ ಪೂರೈಕೆ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
45 ವರ್ಷ ಮೇಲ್ಪಟ್ಟವರಿಗೆ ಎಷ್ಟು ಪ್ರಮಾಣದ ಲಸಿಕೆ?
ಭಾರತದಲ್ಲಿ ಸೆಪ್ಟೆಂಬರ್ 29ರ ಅಂಕಿ-ಅಂಶಗಳ ಪ್ರಕಾರ, 45 ರಿಂದ 59 ವಯೋಮಾನದ 15,88,17,060 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 7,61,53,326 ಜನರಿಗೆ ಎರಡನೇ ಡೋಸ್ ಲಸಿಕೆ ವಿತರಿಸಲಾಗಿದೆ. ಅದೇ ರೀತಿ 60 ವರ್ಷ ಮೇಲ್ಪಟ್ಟ 10,09,75,993 ಜನರಿಗೆ ಕೊವಿಡ್-19 ಲಸಿಕೆಯ ಮೊದಲ ಡೋಸ್ ಹಾಗೂ 5,58,62,760 ಫಲಾನುಭವಿಗಳಿಗೆ ಲಸಿಕೆಯ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ. 18 ವರ್ಷ ಮೇಲ್ಪಟ್ಟ 35,75,96,583 ಮಂದಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದ್ದು, 8,09,03,869 ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ವಿತರಿಸಲಾಗಿದೆ.
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಏರಿಳಿತ
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 18,870 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 378 ಮಂದಿ ಮಹಾಮಾರಿಗೆ ಬಲಿಯಾಗಿದ್ದರೆ, 28,178 ಸೋಂಕಿತರು ಗುಣಮುಖರಾಗಿದ್ದಾರೆ. ಬುಧವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾವೈರಸ್ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,37,16,451ಕ್ಕೆ ಏರಿಕೆಯಾಗಿದೆ. ಇದುವರೆಗೂ 3,29,86,180 ಸೋಂಕಿತರು ಗುಣಮುಖರಾಗಿದ್ದು, 4,47,751 ಜನರು ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. ಇದರ ಹೊರತಾಗಿ ದೇಶದಲ್ಲಿ 2,82,520 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.