ತಿರುವನಂತಪುರ: ರೈಲ್ವೇ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಲಾಗಿದ್ದ 19 ಕಾರುಗಳ ಗಾಜನ್ನು ರಾತ್ರೋ ರಾತ್ರಿ ಪುಡಿಗಟ್ಟಿದ್ದ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 19 ವರ್ಷದ ಯುವಕ ಅಬ್ರಾಹಂ ಎಂದು ತಿಳಿದುಬಂದಿದೆ.
ಕಾರು ಪುಡಿಗಟ್ಟಿದ್ದ ದಿನ ರಾತ್ರಿ ಆರೋಪಿ ಯುವಕ ಮನೆಯಲ್ಲಿ ಜಗಳವಾಡಿದ್ದ. ಮಧ್ಯರಾತ್ರಿ ಅದೇ ಸಿಟ್ಟಲ್ಲಿ ಮನೆಯಿಂದ ಹೊರಬಿದ್ದಿದ್ದ ಯುವಕನಿಗೆ ಪಾರ್ಕಿಂಗ್ ಜಾಗದಲ್ಲಿ ಪಾರ್ಕ್ ಮಾಡಿದ್ದ ಕಾರುಗಳು ಕಾಣಿಸಿದ್ದವು. ಹತ್ತಿರದಲ್ಲಿ ಕಾವಲುಗಾರ ಇರಲಿಲ್ಲವಾದುದರಿಂದ ಕಾರುಗಳನ್ನು ಜಖಂಗೊಳಿಸಿದ ಎಂದು ವಿಚಾರಣೆ ಸಂದರ್ಭದಲ್ಲಿ ಆರೋಪಿ ಬಾಯಿಬಿಟ್ಟಿದ್ದಾನೆ.
ಇದಕ್ಕೂ ಮುನ್ನ ಕಾರುಗಳ ಕಳ್ಳತನಕ್ಕೆ ಆರೋಪಿ ಯತ್ನಿಸಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಕಾರುಗಳಲ್ಲಿ ಕೂಲಿಂಗ್ ಗ್ಲಾಸ್ ಬಿಟ್ಟರೆ ಇತರೆ ಯಾವ ವಸ್ತುಗಳೂ ಕಳವಾಗಿರಲಿಲ್ಲ.