ನವದೆಹಲಿ: ಹೈದರಾಬಾದ್ ಮೂಲದ ಬಯೋಲಾಜಿಕಲ್ ಇ ಔಷಧೀಯಕ ಕಂಪನಿಯ ಕೊವಿಡ್ -19 ಲಸಿಕೆ ಕಾರ್ಬೆವಾಕ್ಸ್‌ನ ವೈದ್ಯಕೀಯ ಪ್ರಯೋಗ ಮತ್ತು ಸಂಶೋಧನೆಗಳಿಗೆ ಸಂಬಂಧಿಸಿದಂತೆ ಅಂತಿಮ ಅಂಕಿ-ಅಂಶ ಹಾಗೂ ದತ್ತಾಂಶವನ್ನು ನವೆಂಬರ್ ತಿಂಗಳಾಂತ್ಯದ ವೇಳೆಗೆ ಸಲ್ಲಿಸುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ.
ಭಾರತದ ಡ್ರಗ್ಸ್ ಕಂಟ್ರೋಲರ್ ಜನರಲ್ 2-18 ವರ್ಷ ವಯಸ್ಸಿನವರಿಗೆ ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ಗೆ ತುರ್ತು ಬಳಕೆಯ ಅನುಮೋದನೆಯ ನೀಡಿದ ಮೇಲೆ ಈ ಲಸಿಕೆಯ ಕುರಿತು ತಜ್ಞರ ಅಭಿಪ್ರಾಯ ಮತ್ತು ಮೌಲ್ಯಮಾಪನ ನಡೆಸಲಾಗುತ್ತಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ ಹಂತ -2 ಮತ್ತು ಹಂತ -3 ಪ್ರಯೋಗಗಳನ್ನು ಪೂರ್ಣಗೊಳಿಸಿತ್ತು. ಈ ಹಿನ್ನೆಲೆ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುವ ಕೊವ್ಯಾಕ್ಸಿನ್ ಲಸಿಕೆಯನ್ನು 2-18 ವಯೋಮಾನದ ಮಕ್ಕಳ ಮೇಲೆ ತುರ್ತು ಬಳಕೆಗೆ ಕೊವಿಡ್-19 ತಜ್ಞರ ಸಮಿತಿ ಶಿಫಾರಸ್ಸು ಮಾಡಿತ್ತು. ಅದರಂತೆ ಕಳೆದ ಅಕ್ಟೋಬರ್ 12ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆ ಬಳಸಲು ಅನುಮೋದನೆ ನೀಡಿತು.
ನವೆಂಬರ್ ವೇಳೆಗೆ ಬಯೋಲಾಜಿಕಲ್-ಇ ದತ್ತಾಂಶ ಸಲ್ಲಿಕೆ
"ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ವಸ್ತುಗಳನ್ನು ಸ್ವೀಕರಿಸುವಲ್ಲಿ ವಿಳಂಬವಾಗಿತ್ತು. ಈ ಹಿನ್ನೆಲೆ ಬಯಾಲಾಜಿಕಲ್-ಇ ಕಂಪನಿಯ ಲಸಿಕೆ ವಿಳಂಬವಾಯಿತು. ಆದರೆ ಈಗ ಕಂಪನಿ ನವೆಂಬರ್ ಅಂತ್ಯದ ವೇಳೆಗೆ ತನ್ನ ಕೋವಿಡ್ -19 ಲಸಿಕೆ ಕಾರ್ಬೆವಾಕ್ಸ್‌ನ ದತ್ತಾಂಶವನ್ನು ಸಲ್ಲಿಸುವ ಸಾಧ್ಯತೆಯಿದೆ" ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕಾರ್ಬೆವಾಕ್ಸ್‌ನ 2 ಮತ್ತು 3ನೇ ಹಂತದ ವೈದ್ಯಕೀಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ವಯಸ್ಕರಿಗೆ ಆರ್‌ಬಿಡಿ ಪ್ರೋಟೀನ್ ಲಸಿಕೆ ನೀಡಲಾಗುತ್ತಿದೆ.
30 ಕೋಟಿ ಡೋಸ್ ಕೊವಿಡ್-19 ಲಸಿಕೆ ಪೂರೈಕೆ
ಬಯಾಲಾಜಿಕಲ್-ಇ ಕಂಪನಿಯು 30 ಕೋಟಿ ಡೋಸ್ ಲಸಿಕೆಯನ್ನು ಪೂರೈಸಲಿದೆ ಎಂದು ಈ ಮೊದಲೇ ಘೋಷಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ ತಿಂಗಳಿನಲ್ಲಿ ಘೋಷಿಸಿದಂತೆ ಡಿಸೆಂಬರ್ ತಿಂಗಳ ಹೊತ್ತಿಗೆ 30 ಕೋಟಿ ಡೋಸ್ ಕಾರ್ಬೆವಾಕ್ಸ್ ಲಸಿಕೆಯನ್ನು ಪೂರೈಕೆ ಮಾಡಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಹೈದರಾಬಾದ್ ಮೂಲದ ಲಸಿಕೆ ಉತ್ಪಾದನಾ ಕಂಪನಿಯೊಂದಿಗೆ 30 ಕೋಟಿ ಡೋಸ್ ಲಸಿಕೆ ಕಾಯ್ದಿರಿಸುವ ವ್ಯವಸ್ಥೆ ಮಾಡಿದೆ ಎಂದು ಸಚಿವವಾಲಯದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
3 ಹಂತಗಳಲ್ಲಿ ವೈದ್ಯಕೀಯ ಪ್ರಯೋಗ ಮತ್ತು ಅಧ್ಯಯನ
ಬಯೋಲಾಜಿಕಲ್-ಇ ಸಂಸ್ಥೆಯ Corbevax ಲಸಿಕೆಯನ್ನು 5 ರಿಂದ 18 ವರ್ಷದ ಮಕ್ಕಳ ಮೇಲೆ ಪ್ರಯೋಗಿಸುವುದಕ್ಕೆ ಅನುಮೋದನೆ ನೀಡಲಾಗಿದೆ. ಈ ಲಸಿಕೆಯನ್ನು ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಅದರ ಪಿಎಸ್‌ಯು ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆಂಟ್ ಕೌನ್ಸಿಲ್ (ಬಿಐಆರ್‌ಎಸಿ) ಬೆಂಬಲದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಪೂರ್ವಭಾವಿವಾಗಿ 3 ಹಂತಗಳಲ್ಲಿ ವೈದ್ಯಕೀಯ ಪ್ರಯೋಗ ಮತ್ತು ಅಧ್ಯಯನಗಳನ್ನು ನಡೆಸಲಾಗಿದೆ. "ಜೈವಿಕ ತಂತ್ರಜ್ಞಾನ ಇಲಾಖೆಯು ಕೇವಲ 100 ಕೋಟಿ ರೂ.ಗಿಂತ ಹೆಚ್ಚಿನ ಅನುದಾನದ ಮೂಲಕ ಹಣಕಾಸಿನ ನೆರವನ್ನಷ್ಟೇ ನೀಡಿಲ್ಲ. ತನ್ನ ಸಂಶೋಧನಾ ಸಂಸ್ಥೆ ಆಗಿರುವ ಆರೋಗ್ಯ ವಿಜ್ಞಾನ ತಂತ್ರಜ್ಞಾನ ಸಂಸ್ಥೆ (ಟಿಎಚ್‌ಟಿಐ) ಮೂಲಕ ಎಲ್ಲಾ ರೀತಿ ಸಂಶೋಧನೆ ಮತ್ತು ವಿಶ್ಲೇಷಣೆ ಅಧ್ಯಯನಗಳನ್ನು ನಡೆಸಲು ಬಯೋಲಾಜಿಕಲ್-ಇ ಜೊತೆ ಪಾಲುದಾರಿಕೆಯನ್ನು ಹೊಂದಿದೆ," ಎಂದು ಸಚಿವಾಲಯ ಈ ಹಿಂದೆಯೇ ಹೇಳಿದೆ.
ಕೊವ್ಯಾಕ್ಸಿನ್ ಲಸಿಕೆ ಬಳಕೆಗೆ ಅನುಮೋದನೆಗೂ ಮುನ್ನ?
ಭಾರತದಲ್ಲಿ 2 ರಿಂದ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಕ್ಸಿನ್ ಕೋವಿಡ್ -19 ಲಸಿಕೆಯನ್ನು ಬಳಸುವುದಕ್ಕೆ ಸಂಬಂಧಿಸಿದಂತೆ 2 ಮತ್ತು 3 ಹಂತಗಳಲ್ಲಿ ಭಾರತ್ ಬಯೋಟೆಕ್ ಸಂಸ್ಥೆಯು ವೈದ್ಯಕೀಯ ಪ್ರಯೋಗಗಳನ್ನು ನಡೆಸಿತ್ತು. ತದನಂತರದಲ್ಲಿ ಕೇಂದ್ರೀಯ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಗೆ (CDSCO) ಪರಿಶೀಲನೆ ಮತ್ತು ತುರ್ತು ಬಳಕೆಗಾಗಿ ಅಕ್ಟೋಬರ್ ತಿಂಗಳ ಆರಂಭದಲ್ಲಿ ದತ್ತಾಂಶವನ್ನು ಸಲ್ಲಿಸಲಾಗಿತ್ತು. "ಈ ಬಗ್ಗೆ ವಿಸ್ತೃತ ಚರ್ಚೆಯ ನಂತರ ಸಮಿತಿಯು ಕೆಲವು ಷರತ್ತುಗಳಿಗೆ ಒಳಪಟ್ಟು ತುರ್ತು ಸಂದರ್ಭಗಳಲ್ಲಿ 2 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆಯ ಬಳಸಲು ದೃಢೀಕರಣ ನೀಡುವಂತೆ ಶಿಫಾರಸು ಮಾಡಿದೆ" ಎಂದು ಎಸ್‌ಇಸಿ ಶಿಫಾರಸುಗಳು ಹೇಳಿವೆ.