ವಾಷಿಂಗ್ ಟನ್: ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಭಾರತ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಾರ್ಮಿಕ ಸುಧಾರಣೆಗಳನ್ನು ಹಾಗೂ ಖಾಸಗೀಕರಣವನ್ನು ಜಾರಿಗೆ ತಂದಿದೆ ಎಂಬುದನ್ನು ಐಎಂಎಫ್ ಉಲ್ಲೇಖಿಸಿದೆ.
ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಐಎಂಎಫ್ ಈ ವರದಿಯನ್ನು ಪ್ರಕಟಿಸಿದ್ದು, ಎಚ್ಚರಿಕೆಯನ್ನೂ ನೀಡಿದೆ. "ಸಾಂಕ್ರಾಮಿಕ ಸಂಬಂಧಿತ ಅಸ್ಥಿರತೆಗಳಿಂದ ಆರ್ಥಿಕ ಮುನ್ನೋಟದ ಮೇಲೆ ಕಾರ್ಮೋಡ ಮುಂದುವರೆದಿದ್ದು ಏರಿಳಿತದ ರಿಸ್ಕ್ ಇದ್ದೇ ಇದೆ ಎಂದು ಹೇಳಿದೆ.
ಹೂಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಚಾಲನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೋವಿಡ್-19 ನ ನಕಾರಾತ್ಮಕ ಪರಿಣಾಮಗಳು ಆರ್ಥಿಕ ಚೇತರಿಕೆಯನ್ನು ಇನ್ನೂ ಮುಂದೂಡುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.
ಭಾರತ ಸರ್ಕಾರದ ಕೋವಿಡ್-19 ನಿರ್ವಹಣೆಯ ಬಗ್ಗೆ ಮಾತನಾಡಿರುವ ಐಎಂಎಫ್, ಸರ್ಕಾರದ ತ್ವರಿತ-ಗಮನಾರ್ಹ ಪ್ರತಿಕ್ರಿಯೆಗಳು ಆರ್ಥಿಕ ಬೆಂಬಲ, ದುರ್ಬಲ ವರ್ಗಗಳಿಗೆ ಹೆಚ್ಚಿನ ಬೆಂಬಲ ನೀಡಿರುವುದು, ವಿತ್ತೀಯ ನೀತಿ ಸರಳೀಕರಣ, ಲಿಕ್ವಿಡಿಟಿ ಪ್ರಾವಿಷನ್ ಹಾಗೂ ಹೊಂದಿಕೊಳ್ಳಬಹುದಾದಂತಹ ಆರ್ಥಿಕ ಕ್ಷೇತ್ರ ಹಾಗೂ ನಿಯಂತ್ರಕ ನೀತಿಗಳನ್ನು ಐಎಂಎಫ್ ಶ್ಲಾಘಿಸಿದೆ.
ಭಾರತದ ಆರ್ಥಿಕ ಬೆಳವಣಿಗೆ 2021-22 ನೇ ಆರ್ಥಿಕ ವರ್ಷದಲ್ಲಿ ಶೇ.9.5 ರಷ್ಟಿರಲಿದೆ. ಹಾಗೂ 2022-23 ರಲ್ಲಿ ಶೇ.8.5 ರಷ್ಟಿರಲಿದೆ ಎಂದು ಅಂದಾಜಿಸಿದೆ.