ನವದೆಹಲಿ: ಝೈಡಸ್ ಕ್ಯಾಡಿಲಾದ ಕೋವಿಡ್-19 ಲಸಿಕೆಯನ್ನು ಖಾಸಗಿ ಆಸ್ಪತ್ರೆಗಳು ಹಲವಾರು ಕಾರಣಗಳಿಂದ ಖರೀದಿಸುವುದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿಲ್ಲ.
ಡಿಎನ್‌ಎ ಲಸಿಕೆಯಾಗಿರುವ ಈ ಲಸಿಕೆಗೆ ಆ.20 ರಂದು ಡಿಸಿಜಿಐ ತುರ್ತು ಬಳಕೆಗೆ ಅನುಮೋದನೆ ನೀಡಿತ್ತು. ಆದರೆ ಹೆಚ್ಚಾಗಿ ಬಳಕೆಯಾಗದೇ ಇರುವುದಕ್ಕೆ ಎರಡು ಪ್ರಮುಖ ಕಾರಣಗಳಿವೆ.
ಉತ್ಪಾದಕರು ಹಾಗೂ ಸರ್ಕಾರದ ನಡುವೆ ಬೆಲೆಗೆ ಸಂಬಂಧಿಸಿದ ಮಾತುಕತೆ ಹಾಗೂ ಈ ಲಸಿಕೆ ಹಾಕುವವರ ಕೊರತೆ.
ಸಣ್ಣ ಖಾಸಗಿ ಆಸ್ಪತ್ರೆಗಳ ಪ್ರಕಾರ ಈಗಾಗಲೇ ಅವರಿಗೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಗಳ ದಾಸ್ತಾನು ತುಂಬಿ ತುಳುಕುತ್ತಿದೆ. ಈಗಾಗಲೇ ಹೆಚ್ಚಾಗಿರುವ ದಾಸ್ತಾನಿನ ಲಸಿಕೆಗಳು ಶೀಘ್ರವೇ ತನ್ನ ಬಳಕೆ ಯೋಗ್ಯ ಅವಧಿಯನ್ನು ಪೂರ್ಣಗೊಳಿಸುತ್ತದೆ ಹಾಗೂ 1,000 ಡೋಸ್ ಗಳಷ್ಟು ಕೋವಿಶೀಲ್ಡ್ ಲಸಿಕೆಗಳು ಇನ್ನೂ ಇವೆ. ಝೈಕೋವ್-ಡಿ ಬೆಲೆ ಹೆಚ್ಚು ಎಂಬ ಊಹಾಪೋಹಗಳಿಂದ ಹಲವು ಆಸ್ಪತ್ರೆಗಳು ಅವುಗಳನ್ನು ಖರೀದಿಸಲೂ ಮುಂದಾಗುತ್ತಿಲ್ಲ. ಅಲ್ಲದೇ ಉಳಿದ ಲಸಿಕೆಗಳಲ್ಲಿ ಎರಡು ಡೋಸ್ ಬೇಕಾದರೆ ಈ ಲಸಿಕೆಯಲ್ಲಿ ಮೂರು ಡೊಸ್ ಪಡೆಯಬೇಕಾಗುತ್ತದೆ. ಮೂರು ಡೋಸ್ ಗಳಿಗೆ 1,900 ರೂಪಾಯಿಗಳಾಗಲಿದೆ. ಇದು ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ
ಸರ್ಕಾರ ಉತ್ಪಾದಕರಿಂದ ಗರಿಷ್ಠ ಮೊತ್ತಕ್ಕೆ ಲಸಿಕೆಯನ್ನು ಖರೀದಿಸುತ್ತಿದ್ದು, ಅಲ್ಲಿನ ನಷ್ಟವನ್ನು ಸರಿದೂಗಿಸುವುದಕ್ಕೆ ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಿನ ದರ ವಿಧಿಸಲಾಗುತ್ತಿದೆ ಎಂದು ಸುಗುಣ ಆಸ್ಪತ್ರೆಯ ನಿರ್ದೇಶಕ ಡಾ. ಆರ್ ರವೀಂದ್ರ ಹೇಳಿದ್ದಾರೆ. ದರಗಳನ್ನು ಹೆಚ್ಚಿಸಿದರೆ ಅದನ್ನು ಪ್ರಶ್ನಿಸಲಾಗುತ್ತದೆ ಎಂದು ಆರ್ ಎಂವಿ ಆಸ್ಪತ್ರೆಯ ಸಂಯೋಜಕ ಕಾರ್ತಿಕ್ ಶೇಖರ್ ತಿಳಿಸಿದ್ದಾರೆ.