ಕಾಸರಗೋಡು: ಕೋವಿಡ್ ಹಿನ್ನೆಲೆಯಲ್ಲಿ ದೀರ್ಘ ಕಾಲದಿಂದ ಸ್ಥಗಿತಗೊಳಿಸಲಾಗಿದ್ದ ಕಾಸರಗೋಡು-ದ.ಕ ಜಿಲ್ಲೆಯ ವಿವಿಧ ಕೇಂದ್ರಗಳ ಅಂತಾರಾಜ್ಯ ಸಂಚಾರದ ಕೆಎಸ್ಸಾರ್ಟಿಸಿ ಬಸ್‍ಗಳು ನ. 1ರಿಂದ ಪುನರಾರಂಭಗೊಳ್ಳುವ ಸಾಧ್ಯತೆಯಿರುವುದಾಗಿ ಕೆಎಸ್ಸಾರ್ಟಿಸಿ ಕಾಸರಗೋಡು ಡಿಪೋ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ಹಿನ್ನೆಲೆಯಲ್ಲಿ ಕಾಸರಗೋಡು ಡಿಪೋದಿಂದ ಮಂಗಳೂರು, ಪುತ್ತೂರು, ಸುಳ್ಯ ಭಾಗಕ್ಕೆ ಬಸ್ ಸಂಚಾರ ಸಥಗಿತಗೊಳಿಸಲಾಗಿತ್ತು. ನಂತರದ ದಿನಗಳಲ್ಲಿ ಮಂಗಳೂರು ತೆರಳುವ ಬಸ್‍ಗಳನ್ನು ತಲಪ್ಪಾಡಿ ವರೆಗೆ, ಪುತ್ತೂರು ಬಸ್‍ಗಳನ್ನು ಅಡ್ಕಸ್ಥಳ ಗಡಿ ವರೆಗೆ, ಸುಳ್ಯ ತೆರಳುವ ಬಸ್ಗಳನ್ನು ಜಾಲ್ಸೂರ್ ವರೆಗೆ ಸೀಮಿತಗೊಳಿಸಲಾಗಿತ್ತು. ಕಳೆದ ಕೆಲವು ದಿವಸಗಳಿಂದ ಪಾಣಾಜೆ-ಪೆರ್ಲ ಹಾದಿಯಾಗಿ ಪುತ್ತೂರು, ವಿಟ್ಲ ಸಂಚರಿಸುವ ಖಾಸಗಿ ಬಸ್‍ಗಳು ಸರ್ವೀಸ್ ಆರಂಭಿಸಿರುವುದರಿಂದ ಪೆರ್ಲ, ಸ್ವರ್ಗ ಪ್ರದೇಶದ ಜನತೆ ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ.
ಕಾಸರಗೋಡು ಡಿಪೋದಲ್ಲಿ ಬಸ್‍ಗಳನ್ನು ಸಂಚಾರಕ್ಕೆ ಸಜ್ಜುಗೊಳಿಸಲಾಗಿದೆ. ಈ ಬಗ್ಗೆ ಅಧಿಕೃತ ಆದೇಶ ಲಭಿಸಿದ ತಕ್ಷಣ ದ.ಕ ಜಿಲ್ಲೆಯ ವಿವಿಧೆಡೆ ಬಸ್ ಸಂಚಾರ ಪುನರಾರಂಭಿಸಲಾಗುವುದು ಎಂದು ಕೆಎಸ್ಸಾಟಿಸಿ ಕಾಸರಗೋಡು ಡಿಪೋ ಸಾರಿಗೆ ಅಧಿಕಾರಿ ಮನೋಜ್ ತಿಳಿಸಿದ್ದಾರೆ.