ಚೆನ್ನೈ: ರಾಜ್ಯದಲ್ಲಿ ಕೋವಿಡ್-19 ನಿಂದ ಸಾವನ್ನಪ್ಪಿರುವವರ ಪೈಕಿ ಶೇ.90 ರಷ್ಟು ಮಂದಿ ಲಸಿಕೆ ಪಡೆದಿರಲಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ.
ಸಾವನ್ನಪ್ಪಿರುವವರ ಪೈಕಿ ಶೇ.90 ರಷ್ಟು ಮಂದಿ ಒಂದೇ ಒಂದು ಡೋಸ್ ಲಸಿಕೆಯನ್ನು ಪಡೆದಿಲ್ಲ ಎಂದು ಅಲ್ಲಿನ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜೆ ರಾಧಾಕೃಷ್ಣನ್ ಹೇಳಿದ್ದಾರೆ.
ನಗರದಲ್ಲಿ ನಾಲ್ಕನೇ ಮೆಗಾ ಲಸಿಕೆ ಕ್ಯಾಂಪ್ ನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು ರಾಜ್ಯದ ಪಶ್ಚಿಮ ಭಾಗದ ಜಿಲ್ಲೆಗಳಲ್ಲಿ ಕೋವಿಡ್-19 ಸೋಂಕು ಹೆಚ್ಚಾಗಿದೆ ಆದರೆ ಹೊಸ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯದ ಜನತೆಗೆ ಕೋವಿಡ್-19 ಲಸಿಕೆ ಪಡೆಯುವಂತೆ ಕರೆ ನೀಡಿರುವ ಅವರು, ಸರ್ಕಾರಿ ಆಸ್ಪತ್ರೆಗಳಲ್ಲಿ ಕಳೆದ 2 ತಿಂಗಳಿನಿಂದ ಸಾವನ್ನಪ್ಪಿರುವವರ ಪೈಕಿ ಶೇ.90 ರಷ್ಟು ಮಂದಿ ಒಂದೇ ಒಂದೂ ಡೋಸ್ ಲಸಿಕೆಯನ್ನೂ ಪಡೆದಿಲ್ಲ ಎಂದು ಹೇಳಿದ್ದಾರೆ.
ಈ ವೈರಾಣುವನ್ನು ನಿಗ್ರಹಿಸುವುದಕ್ಕೆ ಲಸಿಕೆ ಪಡೆಯುವುದೊಂದೇ ಪ್ರಮುಖವಾದ ಮಾರ್ಗವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಂದಿಯೂ ಲಸಿಕೆ ಪಡೆಯದೇ ಇದ್ದಿದ್ದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದ್ದಾರೆ.
ಎರಡು ತಿಂಗಳಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಂಟಾಗಿದ್ದ ಸಾವಿನ ಪೈಕಿ ಶೇ.7.4 ರಷ್ಟು ಮಂದಿ ಒಂದೇ ಡೋಸ್ ಲಸಿಕೆ ಪಡೆದಿದ್ದರೆ, ಶೇ.3.6 ರಷ್ಟು ಮಂದಿ ಎರಡೂ ಡೋಸ್ ಗಳನ್ನು ಪಡೆದ ಹೊರತಾಗಿಯೂ ಸಾವನ್ನಪ್ಪಿದ್ದಾರೆ ಎಂದು ರಾಧಾಕೃಷ್ಣನ್ ಹೇಳಿದ್ದಾರೆ.