ನವದೆಹಲಿ: ಪ್ರಮುಖ ಸಿಮೆಂಟ್ ಸಂಸ್ಥೆ ಅಲ್ಟ್ರಾಟೆಕ್ ಇಂದು ತನ್ನ 2ನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದೆ. ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ನಿವ್ವಳ ಲಾಭ ಶೇ 7.6ರಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಂತೆ ನಿವ್ವಳ ಲಾಭ 1,300.1 ಕೋಟಿ ರು ಬಂದಿದ್ದರೂ ಮಾರುಕಟ್ಟೆ ತಜ್ಞರ ನಿರೀಕ್ಷೆಗೆ ತಕ್ಕ ಫಲಿತಾಂಶ ಹೊರ ಬಂದಿಲ್ಲ.
ಆದಾಯದ ವಿಷಯಕ್ಕೆ ಬಂದರೆ ವರ್ಷದಿಂದ ವರ್ಷಕ್ಕೆ ಲೆಕ್ಕದಂತೆ ಶೇ 15.3 ರಷ್ಟು ಅಧಿಕ ಆದಾಯ ಗಳಿಕೆ ಬಂದಿದ್ದು, ಈ ತ್ರೈಮಾಸಿಕದಲ್ಲಿ 11,548.4 ಕೋಟಿ ರು ಆದಾಯ ಗಳಿಸಿದ್ದು, ನಿರೀಕ್ಷೆಗೆ ತಕ್ಕಂತೆ ಇದೆ. ಈ ತ್ರೈಮಾಸಿಕದಲ್ಲಿ ತೆರಿಗೆ ಕಡಿತಕ್ಕೂ ಮುನ್ನ ಲೆಕ್ಕ ಹಾಕುವ ಲಾಭ ಶೇ 1.6ರಷ್ಟು ಮಾತ್ರ ಏರಿಕೆಯಾಗಿದೆ. ಕಳೆದ ತ್ರೈಮಾಸಿಕದಿಂದಲೇ ಮೂಲ ವಸ್ತುಗಳ ಬೆಲೆ ಏರಿಕೆಯಿಂದ ಉದ್ಯಮ ಪ್ರಗತಿ ಕಂಡಿಲ್ಲ.
ಅಲ್ಟ್ರಾಟೆಕ್ ಸೇರಿದಂತೆ ಅನೇಕ ಸಿಮೆಂಟ್ ಕಂಪನಿಗಳು ಹೆಚ್ಚಿನ ಪ್ರಗತಿ ಕಾಣಲು ಸಾಧ್ಯವಾಗಿಲ್ಲ. ಕೊರೊನಾವೈರಸ್ ಸಾಂಕ್ರಾಮಿಕದ ನಡುವೆ ಕಟ್ಟಡ ನಿರ್ಮಾಣ ಕಾರ್ಯ ನಿರಂತರವಾಗಿ ಜಾರಿಯಲ್ಲಿತ್ತು. ಆದರೆ, ಇತ್ತೀಚೆಗೆ ಚಂಡಮಾರುತ, ಮಳೆ ಅಬ್ಬರಕ್ಕೆ ಅನೇಕ ದೊಡ್ಡ ಯೋಜನೆಗಳ ಕಾಮಗಾರಿ ಪ್ರಗತಿ ಕುಂಠಿತವಾಗಿದೆ.
ಸಂಸ್ಥೆಯ ಮಾರ್ಜಿನ್ 340 ಮೂಲಾಂಶ ಕುಸಿದು ಶೇ 22.6ರಷ್ಟು ತಲುಪಿದ್ದು, ಖರ್ಚು ವೆಚ್ಚ ಅಧಿಕವಾಗಿದ್ದು, ಗ್ರಾಹಕರ ಮೇಲೆ ಹೊರೆ ಹಾಕಲು ಸಾಧ್ಯವಾಗದೆ ಸಂಸ್ಥೆಗಳು ಕಳೆದ ಆರು ತಿಂಗಳಿನಿಂದ ಒದ್ದಾಡುತ್ತಿವೆ. ಪೆಟ್ ಕೋಕ್, ಕಲ್ಲಿದ್ದಲು ಬೆಲೆ ಏರಿಕೆ, ಪೂರೈಕೆ ವ್ಯತ್ಯಯ ಇಡೀ ದೇಶದಲ್ಲಿ ದೊಡ್ಡ ಸಮಸ್ಯೆಯಾಗಿದ್ದು, ಇಂಧನ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಸಿಮೆಂಟ್ ಉದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ. ಇಂಧನ ನಿಭಾಯಿಸುವ ವೆಚ್ಚ ಶೇ 17ರಷ್ಟು ಹೆಚ್ಚಳವಾಗಿದೆ.
ಡಿಸೆಂಬರ್ ತಿಂಗಳಲ್ಲಿ ಬಿಚಾರ್ಪುರ್ ಕಲ್ಲಿದ್ದಲು ಗಣಿಗಾರಿಕೆ ಆರಂಭವಾದರೆ ಒಂದಷ್ಟು ನೆಮ್ಮದಿ ಕಾಣಬಹುದು ಎಂದು ಅಲ್ಟ್ರಾಟೆಕ್ ಸಂಸ್ಥೆ ಲೆಕ್ಕಾಚಾರ ಹಾಕಿದೆ. ಹೊರಗಿನಿಂದ ಕಲ್ಲಿದ್ದಲು ಪೂರೈಕೆ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಲ್ಲಿದ್ದಲು, ಡೀಸೆಲ್ ಸೇರಿದಂತೆ ಇನ್ನಿತರ ಪೂರಕ ಪದಾರ್ಥಗಳ ಅಗತ್ಯ ಪೂರೈಕೆ ಸಿಗದಿದ್ದರೆ ಸಿಮೆಂಟ್ ಕ್ಷೇತ್ರದ ಸಮಸ್ಯೆ ಹೀಗೆ ಮುಂದುವರೆಯಲಿದೆ ಎಂದು ಷೇರುಪೇಟೆಗೆ ಅಲ್ಟ್ರಾಟೆಕ್ ತಿಳಿಸಿದೆ. ಜೊತೆಗೆ ಮಳೆ ಕಡಿಮೆಯಾಗಿ ಕಟ್ಟಡ ಕಾಮಗಾರಿ ಆರಂಭವಾದರೆ, ಬೇಡಿಕೆ ಹೆಚ್ಚಳವಾಗುವ ನಿರೀಕ್ಷೆಯಂತೂ ಇದ್ದೇ ಇದೆ. ಅಲ್ಟ್ರಾಟೆಕ್ ಸಂಸ್ಥೆ ಷೇರುಗಳು ಶೇ 2.6 ರಷ್ಟು ಏರಿಕೆ ಕಂಡು 7,591 ರು ನಂತೆ ಇಂದು ಎನ್ ಎಸ್ ಇಯಲ್ಲಿ ವಹಿವಾಟು ನಡೆಸಿತ್ತು.