ವಿಶ್ವ ಅಂಚೆ ದಿನವನ್ನು ಪ್ರತೀವರ್ಷ ಅಕ್ಟೋಬರ್ 9ರಂದು ಆಚರಿಸಲಾಗುವುದು. ಒಂದು ಕಾಲದಲ್ಲಿ ಅಂಚೆ ಮನುಷ್ಯ ಬಾಂಧವ್ಯದ ಕೊಂಡಿಯನ್ನು ಬೆಸೆಯುವ ಪ್ರಮುಖ ಸಾಧನವಾಗಿತ್ತು. ಅಂಚೆಯಣ್ಣ ದಾರಿ ಕಾಯುತ್ತಾ ಕೂರುತ್ತಿದ್ದವರಿಗೆ ಅವನನ್ನು ನೋಡುವಾಗ ಮರುಭೂಮಿಯಲ್ಲಿ ನೀರು ಸಿಕ್ಕಾಗ ಸಿಗುವ ಸಂಭ್ರಮ...
ದೂರದಲ್ಲಿ ಕೆಲಸದಲ್ಲಿರುವ ಮಗ ಅಪ್ಪ-ಅಮ್ಮನಿಗೆ ಕಳುಹಿಸುವ ಮನಿ ಆರ್ಡರ್, ಪ್ರೇಮಿ ಎದುರು ನೋಡುತ್ತಿದ್ದ ಪ್ರೇಮದ ಕರಿಯೋಲೆ, ದೂರದಲ್ಲಿರುವ ಸಂಗಾತಿಯ ವಿರಹ ವೇದನೆ ಮರಿಸುವಂಥ ಸಾಂತ್ವಾನದ ನುಡಿಗಳನ್ನು ಹೊತ್ತು ಬರುವ ಬರಹ, ಸಂಬಂಧಿಗಳಿಂದ ಕುಶಲೋಪಕಾರಿ ವಿಚಾರಿಸಿ ಬರುವ ಲೆಟರ್‌ಗಳು ಹೀಗೆ ಎಲ್ಲಾ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿತ್ತು ಅಂಚೆ.ಆದರೆ ಕಾಲಗಳು ಉರುಳಿದಂತೆ ತಾಂತ್ರಿಕತೆ ಹೆಚ್ಚಾಯಿತು. ಕೈಯಲ್ಲಿ ಮೊಬೈಲ್ ಬಂತು, ಅಂಚೆಯ ಪ್ರಾಮುಖ್ಯತೆ ನಿಧಾನಕ್ಕೆ ಕಡಿಮೆಯಾಗುತ್ತಾ ಬಂತು, ಜನರು ತಮ್ಮ ವ್ಯವಹಾರಗಳಿಗೆ ಮೊಬೈಲ್ ಬಳಸಲಾರಂಭಿಸಿದರು. ಮೊಬೈಲ್ ಬಂದ ಮೇಲೆ ಪ್ರೇಮಿಗಳಿಗೆ ಪ್ರೇಮ ಪತ್ರ ಬರೆಯುವುದೇ ತಿಳಿಯದಾಯ್ತು.. ತಮ್ಮ ಭಾವನೆಗಳನ್ನು ಟೆಕ್ಸ್ಟ್‌ಗೆ ಅಥವಾ ಇಮೋಜಿಗಳಿಗೆ ಸೀಮಿತಗೊಳಿಸಲಾಯಿತು. ಹೀಗಾಗಿ ಅಂಚೆ ಕಚೇರಿಗಳು ಕಣ್ಮರೆಯಾಗುವಂಥ ಪರಿಸ್ಥಿತಿಯೂ ನಿರ್ಮಾಣವಾಗಿತ್ತು... ಆದರೆ ಅಂಚೆ ತನ್ನ ಹೊಸತನಕ್ಕೆ ಬಾಗಿಲು ತೆರೆಯಿತು... ಸೇವಿಂಗ್ಸ್, ಬ್ಯಾಂಕ್‌ನಲ್ಲಿ ನಡೆಯುತ್ತಿದ್ದ ಹಣದ ವ್ಯವಹಾರವನ್ನು ಅಂಚೆಯಲ್ಲಿ ಮಾಡಬಹುದಾದ ಸೌಲಭ್ಯ ಬಂತು, ಹೂಡಿಕೆಗೆ ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಆರ್‌ಡಿ ಮುಂತಾದ ಆಕರ್ಷಣೆಯ ಯೋಜನೆಗಳಿವೆ, ಖಾಸಗಿ ಪೋಸ್ಟಲ್ ಕಂನಿಗಳಿಗೆ ಸಡ್ಡು ಹೊಡೆಯುವಂತೆ ವೇಗವಾಗಿ ಪೋಸ್ಟ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.. ಹೀಗೆ ಎಲ್ಲಾ ರೀತಿಯಲ್ಲಿ ತನ್ನನ್ನು ನವೀಕರಿಸಿಕೊಂಡು ಮತ್ತೆ ಜನರಿಗೆ ಸಮೀಪವಾಗಿದೆ. ಈಗ ಲೆಟರ್ ಹಿಡಿದು ಪೋಸ್ಟ್ ಮ್ಯಾನ್ ಬಾರದೇ ಇರಬಹುದು, ಆದರೆ ಪೆನ್ಷನ್, ಹೂಡಿಕೆ ಮುಂತಾದ ವ್ಯವಹಾರಗಳು ಇದರ ಮೂಲಕ ನಡೆಯುತ್ತಿರುವುದರಿಂದ ಪೋಸ್ಟ್ ಆಫೀಸ್ ಗರಿಗೆದರಿದೆ.... ಭಾರತೀಯ ಅಂಚೆ ಸೇವೆ ವಿಶ್ವದಲ್ಲಿಯೇ ಅತೋ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ.
ಇತಿಹಾಸ 1874ರಲ್ಲಿ ಸ್ವಿಜರ್‌ಲ್ಯಾಂಡ್‌ನ ಬರ್ನ್‌ನಲ್ಲಿ ಯೂನುವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆ ಮಾಡಲಾಯಿತು. ಅಕ್ಟೋಬರ್ 9, 1969ರಂದು ಜಪಾನಿನ ಟೋಕಿಯೋದಲ್ಲಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತೀವರ್ಷ ಅಕ್ಟೋಬರ್ 9ನ್ನು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುವುದು.
ಥೀಮ್
ಈ ವರ್ಷದ ಥೀಮ್ ಎಂದರೆ "Innovate to Recover" ಚೇತರಿಕೆಗೆ ಹೊಸತನ ಎಂಬುವುದಾಗಿದೆ. ಅಂಚೆಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತ ನೀಡಲಾಗುತ್ತಿದೆ.
