ನವದೆಹಲಿ: ಇತ್ತೀಚಿನ ಗುಪ್ತಚರ ವರದಿಗಳ ಪ್ರಕಾರ, ಈ ವರ್ಷಾಂತ್ಯದೊಳಗೆ ಜಮ್ಮು-ಕಾಶ್ಮೀರದೊಳಗೆ ನುಸುಳಲು ಗಡಿ ನಿಯಂತ್ರಣ ರೇಖೆ -ಎಲ್ ಒಸಿಯಾದ್ಯಂತ ಸುಮಾರು 250 ಉಗ್ರರು ಕಾಯುತ್ತಿರುವುದಾಗಿ ತಿಳಿದುಬಂದಿದೆ.
ಆಗಸ್ಟ್ ತಿಂಗಳಲ್ಲಿ ಸುಮಾರು 180 ಉಗ್ರರು ಪತ್ತೆಯಾಗಿದ್ದರು. ದೇಶದೊಳಗೆ ನುಸುಳಲು ಹೊಂಚು ಹಾಕುತ್ತಿರುವ ಉಗ್ರರು ಬಹುತೇಕ ಲಷ್ಕರ್-ಇ- ತೊಯ್ಬಾ ಮತ್ತು ಜೈಷ್ -ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದವರಾಗಿದ್ದಾರೆ.
ಫೆಬ್ರವರಿಯಲ್ಲಿ ಪಾಕಿಸ್ತಾನ- ಭಾರತ ನಡುವಣ ಕದನ ವಿರಾಮ ಒಪ್ಪಂದ ಆಗಿದ್ದರೂ, ಎಲ್ ಒಸಿಯಾದ್ಯಂತ ಅಪಾರ ಸಂಖ್ಯೆಯ ಉಗ್ರರು ಬರುತ್ತಿರುವುದಾಗಿ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಂಗ್ಧರ್, ಭಿಂಬರ್ ಗಲಿ ಮತ್ತು ನೌಶೇರಾ ಸೆಕ್ಟರ್ ನಲ್ಲಿ ಉಗ್ರರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
ಗರಿಷ್ಠ ಭಯೋತ್ಪಾದಕರನ್ನು ಒಳನುಸುಳಲು ಉಗ್ರ ಸಂಘಟನೆಗಳು ಹೊಸ ಮಾರ್ಗಗಳು, ನದಿಯ ಅಂತರಗಳು ಮತ್ತು ಪತ್ತೆಯಾಗದ ಸುರಂಗಗಳನ್ನು ಅನ್ವೇಷಿಸಬಹುದು ಎಂದು ಇಂಟೆಲ್ ವರದಿಗಳು ಸೂಚಿಸುತ್ತವೆ ಎಂದು ಉನ್ನತ ಗುಪ್ತಚರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಾವು ಜಾಗರೂಕರಾಗಿದ್ದೇವೆ ಮತ್ತು ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ಸಿದ್ಧರಾಗಿದ್ದೇವೆ ಆದರೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಂಡಿರುವುದರಿಂದ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ನೈತಿಕತೆ ಹೆಚ್ಚಿದೆ ಮತ್ತು ಅವರು ಭಯೋತ್ಪಾದಕರಿಗೆ ತರಬೇತಿಯನ್ನು ತೀವ್ರಗೊಳಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.