ವಾಷಿಂಗ್ಟನ್, ಅಕ್ಟೋಬರ್ 09: ವಾರದಲ್ಲಿ ಎರಡು ಬಾರಿ ಸ್ಥಗಿತಗೊಂಡಿದ್ದಕ್ಕಾಗಿ ಫೇಸ್‌ಬುಕ್ ಕ್ಷಮೆ ಯಾಚಿಸಿದೆ.
ಸೋಮವಾರವಷ್ಟೇ ಸತತ 6 ಗಂಟೆಗಳ ಕಾಲ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಸೇವೆ ಸ್ಥಗಿತಗೊಂಡಿತ್ತು. ಇದೀಗ ಶುಕ್ರವಾರ ಮತ್ತೆ ಎರಡು ಗಂಟೆಗಳ ಕಾಲ ಫೇಸ್‌ಬುಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು.
ಎರಡು ಗಂಟೆಗಳ ಕಾಲ ಮತ್ತೆ ಫೇಸ್‌ಬುಕ್ ಸ್ಥಗಿತಗೊಂಡಿದ್ದಕ್ಕೆ ಕ್ಷಮೆ ಯಾಚಿಸುತ್ತೇವೆ, ನಾವು ಸಮಸ್ಯೆಯನ್ನು ಪರಿಹರಿಸಿದ್ದೇವೆ, ಈಗ ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದೆ.
ಸ್ಥಗಿತ ಆರಂಭವಾದ ಸ್ವಲ್ಪ ಸಮಯದ ನಂತರ ಫೇಸ್‌ಬುಕ್, ತನ್ನ ಅಪ್ಲಿಕೇಶನ್‌ಗಳನ್ನು ಪ್ರವೇಶಿಸಲು ಬಳಕೆದಾರರಿಗೆ ತೊಂದರೆ ಆಗುತ್ತಿದೆ ಎಂದು ಒಪ್ಪಿಕೊಂಡಿದೆ. ಆದರೆ ಸಮಸ್ಯೆಯ ಸ್ವರೂಪದ ಬಗ್ಗೆ ಯಾವುದೇ ನಿರ್ದಿಷ್ಟ ವಿವರಗಳನ್ನು ನೀಡಲಿಲ್ಲ. ಬಳಕೆದಾರರು ತಮಗೆ ಬೇಕಾದದ್ದನ್ನು ಪಡೆಯಲು ಅಗತ್ಯವಿರುವ ಡೊಮೈನ್ ನೇಮ್ ಸಿಸ್ಟಮ್‌ನಲ್ಲಿ ಉಂಟಾದ ಅಡಚಣೆಯೇ ಈ ಸ್ಥಗಿತಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಫೇಸ್‌ಬುಕ್, ವಾಟ್ಸ್ಆಯಪ್, ಇನ್‌ಸ್ಟಾಗ್ರಾಂ, ಮೆಸೆಂಜರ್ ಅಪ್ಲಿಕೇಷನ್ಗಳು ಮಾರ್ಕ್ ಜುಕರ್ಬರ್ಗ್ ಕೆಲವೇ ಕೆಲವು ಗಂಟೆಗಳು ಸ್ಥಗಿತಗೊಂಡ ಕಾರಣದಿಂದ ಮಾರ್ಕ್ ಜುಕರ್ ಬರ್ಗ್ 7 ಬಿಲಿಯನ್ ಡಾಲರ್ ನಷ್ಟಕ್ಕೆ ಒಳಗಾಗಿದ್ದರು ಎಂದು ವರದಿಯೊಂದು ಹೇಳಿದೆ.
ಸಾಮಾಜಿಕ ಜಾಲತಾಣಗಳ ಸ್ಥಗಿತದಿಂದ ಕೇವಲ ನಷ್ಟಕ್ಕೆ ಒಳಗಾಗುವುದು ಮಾತ್ರವಲ್ಲದೇ, ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪಟ್ಟಿಯಿಂದ ಮಾರ್ಕ್ ಜುಕರ್ಬರ್ಗ್ ಅವರು ಕೆಳಗಿಳಿದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಮಾಧ್ಯಮಗಳು ಸ್ಥಗಿತಗೊಂಡಿದ್ದವು ಎಂಬ ಸುದ್ದಿಯ ಬೆನ್ನಲ್ಲೇ ಮಾರ್ಕ್ ಜುಕರ್ಬರ್ಗ್ ಅವರ ಷೇರುಗಳು ಶೇಕಡಾ 4.9ರಷ್ಟು ಕುಸಿದಿದ್ದು, ಸೆಪ್ಟೆಂಬರ್ನಿಂದ ಇಲ್ಲಿಯವರೆಗೆ ಒಟ್ಟು ಶೇಕಡಾ 15ರಷ್ಟು ಕುಸಿತ ಕಾಣಲಾಗಿದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಜುಕರ್ಬರ್ಗ್ ಸಂಪತ್ತು 121.6 ಬಿಲಿಯನ್ ಡಾಲರ್ಗೆ ಇಳಿದಿದೆ. ಕೆಲವೇ ಕೆಲವು ವಾರಗಳಲ್ಲಿ 140 ಬಿಲಿಯನ್ ಇದ್ದ ಸಂಪತ್ತು ಗಣನೀಯವಾಗಿ ಕಡಿಮೆಯಾಗಿದೆ.
ಕೆಲವು ದಿನಗಳ ಹಿಂದೆ ವಾಲ್ ಸ್ಟ್ರೀಟ್ ಜರ್ನಲ್ ಫೇಸ್‌ಬುಕ್ ಕುರಿತ ಸರಣಿ ವರದಿಗಳನ್ನು ಪ್ರಕಟಿಸಲು ಆರಂಭಿಸಿತು. ಫೇಸ್ಬುಕ್ನ ಉತ್ಪನ್ನಗಳಲ್ಲಿ ಒಂದಾದ ಇನ್ಸ್ಟಾಗ್ರಾಮ್ ಹದಿಹರೆಯದ ಬಾಲಕಿಯರ ಮೇಲೆ ಯಾವ ರೀತಿ ಪರಿಣಾಮಗಳನ್ನು ಉಂಟುಮಾಡುತ್ತವೆ? ಎಂಬ ಬಗ್ಗೆ ಹಾಗೂ ಜನವರಿ 6ರಂದು ಅಮೆರಿಕ ಕ್ಯಾಪಿಟಲ್ನಲ್ಲಿ ನಡೆದ ಗಲಭೆ ಕುರಿತು ಹರಿದಾಡಿದ ತಪ್ಪು ಮಾಹಿತಿ ಬಗ್ಗೆ ಫೇಸ್ಬುಕ್ಗೆ ನಿಖರ ಮಾಹಿತಿ ಇತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಪ್ರಕಟಿಸಿತ್ತು.
ಈ ವರದಿ ಸರ್ಕಾರದ ಅಧಿಕಾರಿಗಳ ಗಮನವನ್ನು ಫೇಸ್‌ಬುಕ್ ಹಾಗೂ ಫೇಸ್‌ಬುಕ್ ಒಡೆತನದ ಇತರ ಸಂಸ್ಥೆಯ ಮೇಲೆ ಹರಿಸುವುದಕ್ಕೆ ಕಾರಣವಾಯಿತು ಎಂಬುದನ್ನು ವಿಷಲ್ ಬ್ಲೋವರ್ಗಳು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಫೇಸ್‌ಬುಕ್, ರಾಜಕೀಯ ಧ್ರುವೀಕರಣ ಸೇರಿದಂತೆ ಇತರ ಸಮಸ್ಯೆಗಳನ್ನು ಸಾಮಾಜಿಕ ಜಾಲತಾಣಗಳು ಎದುರಿಸುತ್ತಿವೆ. ಈ ಸಮಸ್ಯೆಗಳು ತಂತ್ರಜ್ಞಾನದಿಂದ ಮಾತ್ರ ಉಂಟಾಗಿಲ್ಲ ಎಂದು ಮಾಹಿತಿ ನೀಡಿತ್ತು.