ನವದೆಹಲಿ: ZyCov-D ಕೋವಿಡ್ -19 ಲಸಿಕೆ ದರಕ್ಕೆ ಸಂಬಂಧಿಸಿದಂತೆ ಝೈಡಸ್ ಕ್ಯಾಡಿಲಾ ಕಂಪನಿ ಮತ್ತು ಕೇಂದ್ರ ಸರ್ಕಾರದ ನಡುವೆ ಮಾತುಕತೆ ಪ್ರಗತಿಯಲ್ಲಿದೆ.
12 ವರ್ಷಕ್ಕಿಂತಲೂ ಮೇಲ್ಪಟ್ಟವರಿಗೆ ನೀಡಬಹುದಾದ ಮೂರು ಡೋಸ್ ಕೋವಿಡ್ ಲಸಿಕೆಗಾಗಿ ಔಷಧ ಕಂಪನಿ 1,900 ರೂ. ಪ್ರಸ್ತಾಪಿಸಿದೆ ಎಂಬುದು ತಿಳಿದುಬಂದಿದೆ. ಆದಾಗ್ಯೂ, ಈ ದರವನ್ನು ಕಡಿಮೆಗೊಳಿಸಲು ಸರ್ಕಾರ ಮಾತುಕತೆ ನಡೆಸುತ್ತಿದೆ. ಈ ವಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ಝೈಡಸ್ ಕ್ಯಾಡಿಲಾ ಕಂಪನಿ ತಯಾರಿಸಿರುವ ಸ್ವದೇಶಿ ನಿರ್ಮಿತ ವಿಶ್ವದ ಮೊದಲ ಡಿಎನ್ ಎ ಮೂಲದ ಸೂಜಿ ರಹಿತ ಕೋವಿಡ್ -19 ಲಸಿಕೆಯನ್ನು ಶೀಘ್ರದಲ್ಲಿಯೇ ದೇಶಾದ್ಯಂತ ಪರಿಚಯಿಸಲಾಗುವುದು ಎಂದು ಗುರುವಾರ ಸರ್ಕಾರ ಹೇಳಿತ್ತು.
ಮೂರು ಡೋಸ್ ಲಸಿಕೆಗೆ ಎಲ್ಲಾ ತೆರಿಗೆ ಸೇರಿ 1,900 ರೂಪಾಯಿಯನ್ನು ಕಂಪನಿ ಪ್ರಸ್ತಾಪಿಸಿದೆ. ಮಾತುಕತೆ ಪ್ರಗತಿಯಲ್ಲಿದೆ. ಲಸಿಕೆ ದರವನ್ನು ಪುನರ್ ಪರಿಶೀಲಿಸುವಂತೆ ಸರ್ಕಾರ ಕಂಪನಿಗೆ ಹೇಳಿದೆ. ಲಸಿಕೆ ದರ ಕುರಿತು ಅಂತಿಮ ನಿರ್ಧಾರ ಈ ವಾರದೊಳಗೆ ಹೊರಬೀಳುವ ಸಾಧ್ಯತೆಯಿರುವುದಾಗಿ ಮೂಲವೊಂದು ತಿಳಿಸಿದೆ.