ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ 30 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಸಿಆರ್ ಪಿಎಫ್ ನ ಮಹಿಳಾ ಪೇದೆಗಳು ಮಹಿಳೆಯರನ್ನು ತಪಾಸಣೆಗೊಳಪಡಿಸಿದ್ದಾರೆ.
ಲಾಲ್ ಚೌಕ್ ಪ್ರದೇಶದಲ್ಲಿ ಮಹಿಳಾ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಮಹಿಳೆಯರನ್ನು ತಪಾಸಣೆಗೊಳಪಡಿಸಿದ್ದಾರೆ. ಕಾಶ್ಮೀರದಲ್ಲಿ ಜನಸಾಮಾನ್ಯರ ಹತ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಿಆರ್ ಪಿಎಫ್ ಈ ಕ್ರಮಕ್ಕೆ ಮುಂದಾಗಿದ್ದು, ಮಹಿಳೆಯರ ಬ್ಯಾಗ್ ಗಳನ್ನು ತಪಾಸಣೆಗೊಳಪಡಿಸಿದ್ದಾರೆ.
ಇದಕ್ಕೆ ಕೆಲವು ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾರ್ವಜನಿಕರ ಕಣ್ಣಿಗೆ ಬೀಳದಂತೆ ತಪಾಸಣೆಯನ್ನು ನಡೆಸಬಹುದಿತ್ತು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದಾರೆ. ಮಹಿಳೆಯರು ಖಾಸಗಿಯಾಗಿರಿಸಿಕೊಳ್ಳುವ ಹಲವು ವಸ್ತುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಿರುತ್ತಾರೆ. ಸಿಆರ್ ಪಿಎಫ್ ಮಹಿಳಾ ಸಿಬ್ಬಂದಿಗಳು ಕನಿಷ್ಟ ಮರೆಯಲ್ಲಿ ತಪಾಸಣೆ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಂಡಿಲ್ಲ ಎಂದು ಫರೀದಾ ಎಂಬ ಮಹಿಳೆ ಹೇಳಿದ್ದಾರೆ. "ತಪಾಸಣೆ ಮಾಡುವುದಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ ಮಾಡುವ ರೀತಿಯ ಬಗ್ಗೆ ಆಕ್ಷೇಪವಿದೆ" ಎನ್ನುತ್ತಾರೆ ಫರೀದಾ