ಬದಿಯಡ್ಕ: ಆರೋಗ್ಯ ಇಲಾಖೆಯಲ್ಲಿ 31 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ ಕುಂಬ್ಡಾಜೆ ಮಾಳಿಗೆಮನೆಯ ಶಾರದಾಂಬ ಅವರ ಬೀಳ್ಕೊಡುಗೆ ಸಮಾರಂಭ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆಯಿತು.
ರಾಜ್ಯದ ವಿವಿಧೆಡೆಗಳಲ್ಲಿ ಅವರು ತಮ್ಮ ಸೇವೆಯನ್ನು ನೀಡಿದ್ದರು. ನಿವೃತ್ತರಾಗುವ ಸಂದರ್ಭದಲ್ಲಿ ಬದಿಯಡ್ಕ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜೂನಿಯರ್ ಪಬ್ಲಿಕ್ ಹೆಲ್ತ್ ನರ್ಸ್ ಆಗಿದ್ದರು. ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನ ವೈದ್ಯಾಧಿಕಾರಿ ಡಾ.ಸತ್ಯಶಂಕರ ಭಟ್ ಅವರು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಸನ್ಮಾನಿಸಿ ಮಾತನಾಡಿ, ತನ್ನ ನಿಸ್ವಾರ್ಥವಾದ ಸೇವೆಯಿಂದ ಉತ್ತಮ ಹೆಸರನ್ನು ಗಳಿಸಿದ ಶಾರದಾಂಬ ಅವರು ಎಲ್ಲರಿಗೂ ಆಪ್ತರಾಗಿದ್ದರು. ಅವರ ಭವಿಷ್ಯ ಉತ್ತಮವಾಗಲಿ ಎಂದು ಹಾರೈಸಿದರು. ಇದೇ ಸಂದಭರ್Àದಲ್ಲಿ ವರ್ಗಾವಣೆಗೊಂಡ ಸರೋಜಿನಿ ಅವರನ್ನು ಬೀಳ್ಕೊಡಲಾಯಿತು. ಡಾ. ನಿಶಾದ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಹೆಲ್ತ್ ಇನ್ಸ್‍ಪೆಕ್ಟರ್ ದೇವಿದಾಕ್ಷನ್, ಡಾ. ನದೀನ, ಡಾ. ಆದಿರಾ ಮೊದಲಾದವರು ಮಾತನಾಡಿದರು. ಶಾರದಾಂಬ ಅವರ ಪತಿ ನಿವೃತ್ತ ದೈಹಿಕ ಶಿಕ್ಷಕ ಸೂರ್ಯನಾರಾಯಣ ಉಪಸ್ಥಿತರಿದ್ದರು. ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ನೌಕರರು ಶುಭಕೋರಿದರು.