ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಶಾಲೆಗಳನ್ನು ಮುಚ್ಚುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಸಿ 19 ತಿಂಗಳು ಕಳೆದಿವೆ. ಈಗ ಜಾಗತಿಕವಾಗಿ ಕೇವಲ ಅರ್ಧದಷ್ಟು ಶಾಲೆಗಳು ಮಾತ್ರ ಆಫ್ ಲೈನ್ ತರಗತಿಗಳನ್ನು ನಡೆಸುತ್ತಿದ್ದು, ಶೇ.34 ರಷ್ಟು ಹೈಬ್ರಿಡ್ ಮೋಡ್ ನಲ್ಲೇ ಕಾರ್ಯನಿರ್ವಹಣೆ ಮಾಡುತ್ತಿವೆ ಎನ್ನುತಿದೆ ಕೋವಿಡ್-19 ಗ್ಲೋಬಲ್ ಎಜುಕೇಷನ್ ರಿಕವರಿ ಟ್ರಾಕರ್ ವರದಿ.
ಜಾನ್ ಹಾಪ್ಕಿನ್ಸ್ ವಿವಿ, ವಿಶ್ವ ಬ್ಯಾಂಕ್, ಯುನಿಸೆಫ್ (UNICEF) ಗಳು ಈ ಅಧ್ಯಯನ ವರದಿಯನ್ನು ಪ್ರಕಟಿಸಿದ್ದು, 200 ದೇಶಗಳಲ್ಲಿ ಪುನಾರಂಭ ಹಾಗೂ ಕೋವಿಡ್-19 ಚೇತರಿಕೆ ಯೋಜನೆಗಳ ಟ್ರ್ಯಾಕ್ ಮಾಡುವ ಮೂಲ;ಕ ದೇಶಗಳಿಗೆ ನಿರ್ಧಾರ ಕೈಗೊಳ್ಳುವುದಕ್ಕೆ ಸಹಾಯ ಮಾಡುತ್ತಿದೆ.
ಟ್ರಾಕರ್ ಡೇಟಾದ ಮಾಹಿತಿಯ ಪ್ರಕಾರ ಶೇ.80 ರಷ್ಟು ಶಾಲೆಗಳು ಜಾಗತಿಕ ಮಟ್ಟದಲ್ಲಿ ಎಂದಿನಂತೆ ಕಾರ್ಯನಿರ್ವಹಣೆ ಮಾಡುತ್ತಿವೆ.
ಈ ಪೈಕಿ ಶೇ.54 ರಷ್ಟು ಎಂದಿನಂತೆ ಶಾಲೆಗಳಲ್ಲಿ ಆಫ್ ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದರೆ, ಶೇ.34 ರಷ್ಟು ಶಾಲೆಗಳು ಅರ್ಧ ಆಫ್ ಲೈನ್ ಇನ್ನರ್ಧ ಆನ್ ಲೈನ್ (ಹೈಬ್ರಿಡ್) ತರಗತಿಗಳನ್ನು ನಡೆಸುತ್ತಿವೆ ಶೇ.10 ರಷ್ಟು ಸಂಸ್ಥೆಗಳು ದೂರಶಿಕ್ಷಣದ ಸೂಚನೆಗಳ ಮೂಲಕ ಕಾರ್ಯನಿರ್ವಹಣೆ ಮಾಡುತ್ತಿದ್ದರೆ, ಶೇ.2 ರಷ್ಟು ಸ್ಥಗಿತಗೊಂಡಿವೆ.
"ಶೇ.53 ರಷ್ಟು ದೇಶಗಳು ಶಿಕ್ಷಕರಿಗೆ ಲಸಿಕೆ ನೀಡುವುದನ್ನು ಆದ್ಯತೆಯನ್ನಾಗಿಸಿಕೊಂಡಿವೆ. ವಿಶ್ವಬ್ಯಾಂಕ್ ಈ ನಡುವೆ ಸಲಹೆ ನೀಡಿದ್ದು ಯಾವುದೇ ದೇಶಗಳು ತನ್ನ ಜನಸಂಖ್ಯೆಗೆ ಅಥವಾ ಶಾಲಾ ಸಿಬ್ಬಂದಿಗಳಿಗೆ ಶಾಲೆಗಳನ್ನು ಪುನಾರಂಭಗೊಳಿಸುವ ಮೊದಲು ಲಸಿಕೆ ನೀಡಲು ಇನ್ನು ಯೋಚಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದೆ.
ಶಿಕ್ಷಣದ ಪುನಾರಂಭವನ್ನು ಉತ್ತೇಜಿಸುವುದಕ್ಕಾಗಿ, ಶಿಕ್ಷಕರಿಗೆ ಲಸಿಕೆ ನೀಡುವುದನ್ನು ಆದ್ಯತೆಯನ್ನಾಗಿಸಿಕೊಳ್ಳಬೇಕು ಲಸಿಕೆ ನೀಡಲು ಸಾಧ್ಯವಾಗದೇ ಇದ್ದಲ್ಲಿ ಸುರಕ್ಷಿತ, ಅಗತ್ಯ ಕ್ರಮಗಳ ಮೂಲಕ ಶಾಲೆಗಳ ಪುನಾರಂಭಕ್ಕೆ ದಾರಿಗಳನ್ನು ಕಂಡುಕೊಳ್ಳಬೇಕು" ಎಂದು ವಿಶ್ವಬ್ಯಾಂಕ್ ನ ಶೈಕ್ಷಣಿಕ ತಂಡ ಸಲಹೆ ನೀಡಿದೆ
"ಜಾಗತಿಕವಾಗಿ ಈಗಾಗಲೇ ಪುನಾರಂಭಗೊಂಡಿರುವ ಹಲವು ಶಾಲೆಗಳಲ್ಲಿ ಕೋವಿಡ್-19 ಸೋಂಕು ಹರಡದಂತೆ ಅತ್ಯಂತ ಸರಳ ಹಾಗೂ ಆರ್ಥಿಕ ದೃಷ್ಟಿಯಿಂದ ಹೊರೆಯಾಗದಂತೆ ಕ್ರಮ ಕೈಗೊಳ್ಳುವುದು ಯಶಸ್ವಿಯಾಗಿರುವ ಉದಾಹರಣೆಗಳಿವೆ ಎಂದು ವಿಶ್ವಬ್ಯಾಂಕ್ ನ ಶೈಕ್ಷಣಿಕ ತಂಡ ಮಾಹಿತಿ ನೀಡಿದೆ. ಇನ್ನಷ್ಟು ದಿನ ಶಾಲೆಗಳನ್ನು ಪುನಾರಂಭಗೊಳಿಸದೇ ಇದ್ದಲ್ಲಿ ಭವಿಷ್ಯದಲ್ಲಿ ಉಂಟಾಗುವ ಅಪಾಯಗಳನ್ನು ಮನಗಂಡು ವಿಶ್ವಬ್ಯಾಂಕ್ ಈ ಸಲಹೆ ನೀಡಿದೆ.