ಬೆಂಗಳೂರು: ನಟ ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಇಂದು ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ.
ನಿನ್ನೆಯೇ (ಅ.14) ಬಿಡುಗಡೆಯಾಗಬೇಕಿದ್ದ ಕೋಟಿಗೊಬ್ಬ-3 ತಾಂತ್ರಿಕ ಕಾರಣದಿಂದಾಗಿ ಬಿಡುಗಡೆಯಾಗಿರಲಿಲ್ಲ. ಚಿತ್ರ ನಿನ್ನೆ ಮುಂಜಾನೆಯೇ ಚಿತ್ರಮಂದಿರಗಳ ಬಳಿ ನೆಚ್ಚಿನ ನಟನ ಚಿತ್ರ ಕಣ್ತುಂಬಿಕೊಳ್ಳಲು ಕಾದಿದ್ದ ಅಭಿಮಾನಿಗಳು ರೊಚ್ಚಿಗೆದ್ದು, ಕೆಲ ಚಿತ್ರಮಂದಿರಗಳಿಗೂ ಕಲ್ಲು ತೂರಿದ್ದರು. ಅಭಿಮಾನಿಯೊಬ್ಬ ಆತ್ಮಹತ್ಯೆಯ ಬೆದರಿಕೆಯನ್ನೂ ಹಾಕಿದ್ದ. ನಿರ್ಮಾಪಕ ಸೂರಪ್ಪ ಬಾಬು, 'ವಿತರಕರು ಮಾಡಿದ ಮೋಸದಿಂದ ಇಂದು ಚಿತ್ರ ತೆರೆಗೆ ಬರಲು ಸಾಧ್ಯವಾಗಲಿಲ್ಲ. ನಾಳೆ ಬೆಳಗ್ಗೆ ಖಂಡಿತ ಸಿನಿಮಾ ಬಿಡುಗಡೆಯಾಗಲಿದೆ' ಎಂದಿದ್ದರು. ಅಲ್ಲದೆ, ನಟ ಸುದೀಪ್ ಕೂಡ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಅಭಿಮಾನಿಗಳು ದುಡಕಬಾರದು ಎಂದು ಮನವಿ ಕೂಡ ಮಾಡಿಕೊಂಡಿದ್ದರು. ಇಷ್ಟೆಲ್ಲ ಬೆಳವಣಿಗೆ ಬಳಿಕ ಇಂದು(ಶುಕ್ರವಾರ) ಚಿತ್ರ ಬಿಡುಗಡೆಯಾಗಿದೆ.
ಬೆಳಗ್ಗೆ 6ಕ್ಕೆ ಆರಂಭವಾಗಬೇಕಿದ್ದ ಮೊದಲ ಪ್ರದರ್ಶನ 7, 8 ಗಂಟೆಗೆ ಆರಮಭಗೊಂಡಿದೆ. ಅಭಿಮಾನಿಗಳು ಮಾತ್ರ ಮುಂಜಾನೆ 4 ಗಂಟೆಗೇ ಥಿಯೇಟರ್ ಬಳಿ ಜಮಾಯಿಸಿದ್ದರು. ಕಿಚ್ಚ ಸುದೀಪ್ಗೆ ಜಯವಾಗಲಿ ಎಂದು ಜೈಕಾರ ಕೂಗುತ್ತಿದ್ದರು.