ನವದೆಹಲಿ: ಬ್ರಿಟನ್ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಭಾರತವೂ ಇಲ್ಲಿಗೆ ಆಗಮಿಸುವ ಬ್ರಿಟನ್ ಪ್ರಜೆಗಳ ವಿಷಯವಾಗಿ ಕಠಿಣ ನಿರ್ಧಾರಕೈಗೊಂಡಿದೆ.
ಅ.04 ರಿಂದ ಭಾರತಕ್ಕೆ ಆಗಮಿಸುವ ಎಲ್ಲಾ ಬ್ರಿಟನ್ ಪ್ರಜೆಗಳಿಗೆ ಆರ್ ಟಿಪಿಸಿಆರ್ ಪರೀಕ್ಷೆ ಹಾಗೂ 10 ದಿನಗಳ ಕಡ್ಡಾಯ ಕ್ವಾರಂಟೈನ್ ನ್ನು ಭಾರತ ಸರ್ಕಾರ ವಿಧಿಸಿದೆ.
ಹೊಸ ನಿಯಮಗಳ ಅಡಿಯಲ್ಲಿ ಎಲ್ಲಾ ಬ್ರಿಟನ್ ಭಾರತಕ್ಕೆ ಆಗಮಿಸುತ್ತಿದ್ದಂತೆಯೇ ಅವರ ಲಸಿಕೆಯ ಸ್ಥಿತಿ ಏನೇ ಇರಲಿ, ಕೋವಿಡ್-19 ಆರ್ ಟಿಪಿಸಿಆರ್ ಪರೀಕ್ಷೆಯನ್ನು ಹೊರಡುವುದಕ್ಕೂ ಮುನ್ನವೇ ಮಾಡಿಸಿಕೊಂಡಿರಬೇಕಾಗುತ್ತದೆ.
ಪ್ರಯಾಣಿಕರ ಲಸಿಕೆಯ ಸ್ಥಿತಿ ಏನೇ ಇರಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ. ಬಂದ ನಂತರ 8 ದಿನಗಳಾದ ಮೇಲೂ ಪರೀಕ್ಷೆಯನ್ನು ಕೈಗೊಳ್ಳಬೇಕಾಗುತ್ತದೆ.
ಮನೆಯಲ್ಲಿ ಅಥವಾ ಆಗಮಿಸಿದ ವಿಳಾಸದಲ್ಲಿ 10 ದಿನಗಳ ಕ್ವಾರಂಟೈನ್ ನ್ನೂ ಅ.04 ರಿಂದ ಕಡ್ಡಾಯಗೊಳಿಸಲಾಗಿದೆ
ಕೋವಿಡ್-19 ಲಸಿಕೆ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಭಾರತದ ಆತಂಕಗಳನ್ನು ಬ್ರಿಟನ್ ನಿವಾರಿಸದೇ ಇದ್ದಲ್ಲಿ ಬ್ರಿಟನ್ ಸರ್ಕಾರದ ನಿರ್ಧಾರಗಳಿಗೆ ಪ್ರತಿಯಾಗಿ ಭಾರತವೂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಭಾರತ ಸರ್ಕಾರ ಎಚ್ಚರಿಸಿತ್ತು. ಬ್ರಿಟನ್ ನ ನಡೆಯನ್ನು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶ್ರಿಂಗ್ಲಾ ತಾರತಮ್ಯಕಾರಿ ಎಂದು ಹೇಳಿದ್ದರು.
ಬ್ರಿಟನ್ ಸರ್ಕಾರ ಹೊರಡಿಸಿದ್ದ ಆದೇಶದಲ್ಲಿ ಭಾರತೀಯ ಪ್ರಯಾಣಿಕರು ಕೋವಿಶೀಲ್ಡ್ ಲಸಿಕೆಯನ್ನು ಪಡೆದಿದ್ದರೆ ಅದನ್ನು ಲಸಿಕೆ ಪಡೆದಿಲ್ಲ ಎಂದು ಪರಿಗಣಿಸಬೇಕಾಗುತ್ತದೆ ಹಾಗೂ 10 ದಿನಗಳವರೆಗೆ ಸೆಲ್ಫ್ ಐಸೊಲೇಷನ್ ಗೆ ಒಳಪಡಬೇಕಾಗುತ್ತದೆ ಎಂಬ ನಿಯಮ ಜಾರಿಗೊಳಿಸಿತ್ತು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ವಿಷಯವನ್ನು ಬ್ರಿಟನ್ ವಿದೇಶಾಂಗ ಸಚಿವರೊಂದಿಗೆ ಪ್ರಸ್ತಾಪಿಸಿದ್ದರು.