ನವದೆಹಲಿ: ವಲಯದಾದ್ಯಂತ ತಡೆರಹಿತ 'ಸಮಗ್ರ ಸರಕು ಸಾಗಣೆ'ಯನ್ನು ಸುಧಾರಿಸಲು, ಭಾರತೀಯ ರೈಲ್ವೇ ಮುಂದಿನ 3 ರಿಂದ 4 ವರ್ಷಗಳಲ್ಲಿ ಸುಮಾರು 500 ಮಲ್ಟಿ ಮೋಡ್ ಕಾರ್ಗೋ ಟರ್ಮಿನಲ್‌ಗಳನ್ನು ಅಭಿವೃದ್ಧಿಪಡಿಸಲಿದ್ದು, ಅಂದಾಜು 50 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ರೈಲ್ವೆ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
"ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು ಮತ್ತು ನದಿ ಜಲಮಾರ್ಗಗಳನ್ನು ಒಂದು ಹಂತದಲ್ಲಿ ವಿವಿಧ ವಿಧಾನಗಳ ತಡೆರಹಿತ ಸಾಗಣೆಗೆ ಸಂಪರ್ಕಿಸಲು ಟರ್ಮಿನಲ್ ಅನ್ನು ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅಡಿಯಲ್ಲಿ ನಿರ್ಮಿಸಲಾಗುವುದು" ಎಂದು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ. ದೇಶದಲ್ಲಿ ಸರಕು ಸಾಗಣೆಯನ್ನು ಮೂಲದಿಂದ ಅಂತಿಮ ಗಮ್ಯಸ್ಥಾನಕ್ಕೆ ಸುಲಭವಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
"ಇವುಗಳು ದೇಶದಾದ್ಯಂತ ಸರಕುಗಳ ತಡೆರಹಿತ ಚಲನೆಗಾಗಿ ಒಂದು ಹಂತದಲ್ಲಿ ವಿಭಿನ್ನ ವಿಧಾನಗಳ ಸಾರಿಗೆಯನ್ನು ಸಂಯೋಜಿಸುವ ಟರ್ಮಿನಲ್‌ಗಳಾಗಿವೆ" ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಿದ ನಂತರ ಪತ್ರಿಕಾಗೋಷ್ಠಿ ನಡೆಸಿದ ರೈಲ್ವೇ ಸಚಿವರು, ಈ ಯೋಜನೆಗಳು ಲಾಜಿಸ್ಟಿಕ್ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ, ಇದು ಪ್ರಸ್ತುತ ಜಿಡಿಪಿಯ 13 ಪ್ರತಿಶತವಾಗಿದೆ. "ಒಮ್ಮೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆಗೊಳಿಸಿದರೆ ದೇಶದಲ್ಲಿ ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟ ಸುಧಾರಿಸುತ್ತದೆ. ಮೂರು ವರ್ಷಗಳಲ್ಲಿ ಕನಿಷ್ಠ 200 ಅಂತಹ ಟರ್ಮಿನಲ್‌ಗಳು ಸಿದ್ಧವಾಗುತ್ತವೆ" ಎಂದಿದ್ದಾರೆ.
ಈ ಯೋಜನೆಯ ಒಟ್ಟು ವೆಚ್ಚ ಸುಮಾರು 50 ಸಾವಿರ ಕೋಟಿ ರೂಪಾಯಿಗಳಾಗಿದ್ದು, ಯೋಜನೆಯ ವಿವರವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ರೈಲ್ವೆ ಸಚಿವರು, ಈ ಗತಿ ಶಕ್ತಿ ಇಂಟಿಗ್ರೇಟೆಡ್ ಟರ್ಮಿನಲ್‌ಗಳನ್ನು ಕಲ್ಲಿದ್ದಲು, ಉಕ್ಕು, ಸಿಮೆಂಟ್, ಬಾಕ್ಸೈಟ್, ಇತ್ಯಾದಿ ಪಾರ್ಸೆಲ್‌ಗಳಂತಹ ಬೃಹತ್ ಸರಕು ಸಾಗಣೆಗಾಗಿ ನಿರ್ಮಾಣವಾಗಲಿದೆ ಎಂದು ಹೇಳಿದ್ದಾರೆ.
ಬುಧವಾರ ಕಾರ್ಯಕ್ರಮಕ್ಕೆ ಚಾಲನೆಯಿತ್ತ ಪ್ರಧಾನಿ ಮೋದಿ, 2014 ರ ಹಿಂದಿನ 5 ವರ್ಷಗಳಲ್ಲಿ ಕೇವಲ 1900 ಕಿಮೀ ರೈಲ್ವೇ ಮಾರ್ಗಗಳು ದ್ವಿಗುಣಗೊಂಡವು. ಕಳೆದ 7 ವರ್ಷಗಳಲ್ಲಿ, 9 ಸಾವಿರ ಕಿಲೋಮೀಟರ್‌ಗಳಷ್ಟು ರೈಲು ಮಾರ್ಗಗಳನ್ನು ದ್ವಿಗುಣಗೊಳಿಸಲಾಗಿದೆ.
2014 ಕ್ಕಿಂತ ಹಿಂದಿನ 5 ವರ್ಷಗಳಲ್ಲಿ 3ಸಾವಿರ ಕಿಮೀ ರೈಲ್ವೇಯನ್ನು ವಿದ್ಯುದ್ದೀಕರಿಸಲಾಯಿತು. ಕಳೆದ 7 ವರ್ಷಗಳಲ್ಲಿ, 24000 ಕಿಲೋಮೀಟರ್‌ಗಳಷ್ಟು ರೈಲ್ವೆ ಹಳಿಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಹೇಳಿದ್ದಾರೆ.