ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಕಾಂಗ್ರೆಸ್ ಮಹತ್ವದ ನಿರ್ಧಾರ ಪ್ರಕಟಿಸಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಶೇಕಡಾ 40 ರಷ್ಟು ಟಿಕೆಟ್ ನೀಡುವುದಾಗಿ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣೆಯಲ್ಲಿ ಶೇ. 40 ರಷ್ಟು ಟಿಕೆಟ್ ನ್ನು ಮಹಿಳೆಯರಿಗೆ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈ ಟಿಕೆಟ್ ಗಳನ್ನು ಕೇವಲ ಜಾತಿ ಅಥವಾ ಧರ್ಮದ ಆಧಾರದ ಮೇಲೆ ನಿಡದೆ ಅರ್ಹತೆ ಆಧಾರದ ಮೇರೆಗೆ ನೀಡಲಾಗುವುದು ಎಂದರು.
ಮಹಿಳೆಯರ ಸಬಲೀಕರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೇರೆ ಇತರ ರಾಜಕೀಯ ಪ್ರೇರಿತ, ಅಜೆಂಡಾದೊಂದಿಗೆ ಈ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಅವರು ಸ್ಪಷ್ಪಪಡಿಸಿದರು.
ಲಖೀಂಪುರ್ ಖೇರಿ ಘಟನೆ ಕುರಿತಾಗಿ ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ ಗಾಂಧಿ ವಾದ್ರಾ, ಹತ್ಯೆ ಮಾಡಿದವರನ್ನು ಕೇಂದ್ರ ಸರ್ಕಾರ ರಕ್ಷಿಸುತ್ತಿರುವುದು ಮತ್ತು ಕೊಲ್ಲಲ್ಪಟ್ಟವರು, ಇಲ್ಲಿ ನ್ಯಾಯಕ್ಕಾಗಿ ಮೊರೆಯಿಡುತ್ತಿರುವುದು ದುರಾದೃಷ್ಟಕರವಾಗಿದೆ ಎಂದರು.
ಹತ್ರಾಸ್, ಲಖೀಂಪುರ್ ಖೇರಿಯಲ್ಲಿ ಏನು ಸಂಭವಿಸಿತು ಎಂಬುದನ್ನು ನಾವೆಲ್ಲ ನೋಡಿದ್ದೇವೆ. ಇಂತಹ ಬಿಜೆಪಿ ಸರ್ಕಾರದಿಂದ ನೀವು ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.