ಮಥುರಾ: ಉತ್ತರ ಪ್ರದೇಶದ ರಿಕ್ಷಾ ಚಾಲಕರೊಬ್ಬರಿಗೆ 3.48 ಕೋಟಿ ರೂಪಾಯಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ಘಟನೆ ನಡೆದಿದೆ. ಲಕ್ಷ ರೂಪಾಯಿಯನ್ನೇ ನೋಡದ ತನಗೆ ಕೋಟಿಗಟ್ಟಲೆ ತೆರಿಗೆ ಪಾವತಿಗೆ ನೋಟಿಸ್ ನೋಡಿ ಆಟೋ ಚಾಲಕ ಕಕ್ಕಾಬಿಕ್ಕಿಯಾಗಿದ್ದಾನೆ.
ಮಥುರಾದ ಬಾಕಾಳ್‌ಪುರದ ಅಮರ್ ಕಾಲೋನಿಯ ರಿಕ್ಷಾ ಚಾಲಕ ಪ್ರತಾಪ್ ಸಿಂಗ್ ಅವರಿಗೆ ಇಂಥದ್ದೊಂದು ನೋಟಿಸ್ ಬಂದಿದ್ದು, ಅವರು ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಆಗಿದ್ದೇನು?
ಬ್ಯಾಂಕ್‌ಗೆ ಪ್ಯಾನ್ ಕಾರ್ಡ್ ನೀಡಬೇಕೆಂದು ತಿಳಿದಾಗ ಪ್ರತಾಪ್ ಸಿಂಗ್ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದರು. ಇವರು ಅನಕ್ಷರಸ್ಥರಾಗಿರುವ ಕಾರಣ ಅಲ್ಲಿಯೇ ಇರುವ ಕೇಂದ್ರ ಒಂದರಲ್ಲಿ ಇದಕ್ಕೆ ಅರ್ಜಿ ಸಲ್ಲಿಸಿದ್ದರು. ಬಳಿಕ ಸಂಜಯ್ ಸಿಂಗ್ ಎಂಬುವರು ಪ್ಯಾನ್ ಕಾರ್ಡೊಂದರ ನಕಲು ಪ್ರತಿಯನ್ನು ನೀಡಿದ್ದರು. ಆದರೆ ಇದು ನಕಲು ಪ್ರತಿ ಎಂದು ಪ್ರತಾಪ್ ಸಿಂಗ್‌ಗೆ ತಿಳಿಯಲಿಲ್ಲ.
ಇದಾದ ಕೆಲವು ತಿಂಗಳ ಬಳಿಕ ಆದಾಯ ತೆರಿಗೆ ಇಲಾಖೆಯಿಂದ 3.48 ಕೋಟಿ ರೂಪಾಯಿ ತೆರಿಗೆ ಪಾವತಿಗೆ ನೋಟಿಸ್ ಬಂದಿದೆ. ಇದನ್ನು ನೋಡಿ ಪ್ರತಾಪ್ ಸಿಂಗ್ ಕಕ್ಕಾಬಿಕ್ಕಿಯಾಗಿದ್ದಾರೆ. ನಂತರ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿದ್ದಾರೆ. ನಂತರ ದಾಖಲೆ ಪರಿಶೀಲಿಸಿದಾಗ ನಿಜವಾಗಿಯೂ ಈತನ ಹೆಸರಿನಲ್ಲಿ 43 ಕೋಟಿ 44 ಲಕ್ಷದ 36 ಸಾವಿರದ 201 ರೂಪಾಯಿ ವಹಿವಾಟು ನಡೆದಿರುವುದು ತಿಳಿದಿದೆ. ಇದರ ತನಿಖೆ ಮಾಡಿದಾಗ ಪ್ಯಾನ್‌ನ ಅಸಲಿ ಕಾರ್ಡ್ ಬಳಸಿ ಪ್ರತಾಪ್ ಸಿಂಗ್ ಹೆಸರು ಬಳಸಿಕೊಂಡು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಖ್ಯೆ ಪಡೆಯಲಾಗಿದ್ದು, ಆ ಮೂಲಕ ವ್ಯವಹಾರ ನಡೆಸಲಾಗಿದೆ. 3.48 ಕೋಟಿ ರೂಪಾಯಿ ತೆರಿಗೆ ಕಟ್ಟದೇ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಠಾಣೆ ಅಧಿಕಾರಿ (ಎಸ್‌ಎಚ್‌ಒ) ಅನುಜ್ ಕುಮಾರ್, ಸದ್ಯ ಸಿಂಗ್ ಈ ಬಗ್ಗೆ ತನಿಖೆ ನಡೆಸಿ ಏನಾಗಿದೆ ಎಂಬುದನ್ನು ಪರಿಶೀಲಿಸುತ್ತೇವೆ ಎಂದಿದ್ದಾರೆ.