ಕಾಸರಗೋಡು: ಹಾಲು ಉತ್ಪಾದನೆ ರಂಗಕ್ಕೆ ಪುನಶ್ಚೇತನ ನೀಡುವ "ಕ್ಷೀರಗ್ರಾಮ" ಯೋಜನೆಗೆ ಮಾದರಿಯಾಗಿ ಕಾಸರಗೋಡು ಜಿಲ್ಲೆಯ ಅಜಾನೂರು ಗ್ರಾಮ ಪಂಚಾಯತ್ ಸಾಧನೆ ಮಾಡುತ್ತಿದೆ.
ಕೋವಿಡ್ ಸೋಂಕಿನ ಮುಗ್ಗಟ್ಟಿನ ನಡುವೆಯೂ 508 ಹಾಲುತ್ಪಾದಕರಿಂದ ಪ್ರತಿದಿನ 4800 ಲೀಟರ್ ಹಾಲು ಇಲ್ಲಿ ಅಳೆದು ಸಂಗ್ರಹಿಸಲಾಗುತ್ತದೆ. "ಕ್ಷೀರಗ್ರಾಮ" ಯೋಜನೆ ಆರಂಭಗೊಂಡ ನಂತರ ಅಜಾನೂರು ಗ್ರಾಮ ಪಂಚಾಯತ್ ನಲ್ಲಿ 99 ನೂತನ ಹಸುಗಳು, 16 ಕರುಗಳು ಸೇರ್ಪಡೆಗೊಂಡಿವೆ. ಕಳೆದ ವರ್ಷಕ್ಕಿಂತ 40 ಮಂದಿ ಕೃಷಿಕರು ಕ್ಷೀರಗ್ರಾಮ ಯೋಜನೆಗೆ ಪಾದಾರ್ಪಣೆ ಮಾಡಿದ್ದಾರೆ ಎಂದು ಡೈರಿ ಡೆಪ್ಯೂಟಿ ಡೈರೆಕ್ಟರ್ ಜಿಜಾ ಸಿ.ಕೃಷ್ಣನ್ ತಿಳಿಸಿದರು.
ಹಾಲುತ್ಪಾದನೆ ಇಲಾಖೆ ಜಾರಿಗೊಳಿಸುವ ಕ್ಷೀರಗ್ರಾಮ ಯೋಜನೆಗೆ ಕಾಞಂಗಾಡು ಬ್ಲೋಕ್ ನಲ್ಲಿ ಸೇರಿರುವ ಅಜಾನೂರು ಗ್ರಾಮಪಂಚಾಯತ್ ಕಳೆದ ವರ್ಷ ಆಯ್ಕೆಗೊಂಡಿತ್ತು. ರಾಜ್ಯದ ಆಯ್ದ 25 ಪಂಚಾಯತ್ ಗಳಲ್ಲೀ ಇದೂ ಒಂದಾಗಿದೆ.
2 ಹಸುಗಳ ಯೂನಿಟ್, 5 ಹಸುಗಳ ಯೂನಿಟ್, ಕಂಪೆÇೀಸ್ಟ್ ಡೈರಿ ಯೂನಿಟ್ ಕೇಂದ್ರೀಕೃತ ಆರ್ಥಿಕ ಸಹಾಯ, ಹಾಲು ಕರೆಯುವ ಯಂತ್ರ, ಮಿನರಲ್ ಮಿಕ್ಚರ್, ವೈಜ್ಞಾನಿಕ ರೀತಿಯ ಹಟ್ಟಿ ನಿರ್ಮಾಣ ಇತ್ಯಾದಿ ಯೋಜನೆಗಳಿಗಾಗಿ ಅಜಾನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೃಷಿಕರಿಗೆ 50 ಲಕ್ಷ ರೂ. ಈ ವರೆಗೆ ಆರ್ಥಿಕಸಹಾಯ ರೂಪದಲ್ಲಿ ನೀಡಲಾಗಿದೆ ಎಂದವರು ನುಡಿದರು.
ಹಸುಗಳ ಸಂಖ್ಯೆಯ ಹಿನ್ನೆಲೆಯಲ್ಲಿ ಕೃಷಿಕರಿಗೆ ಸಬ್ಸಿಡಿ ನೀಡಲಾಗುತ್ತದೆ. 5 ಯಾ ಅದಕ್ಕಿಂತ ಅಧಿಕ ಹಾಲುಕರೆಯುವ ಹಸುಗಳನ್ನು ಸಾಕುವ 18 ಫಾರಂಗಳು ಪಂಚಾಯತ್ ನಲ್ಲಿವೆ. ಕಾಞಂಗಾಡು, ಚಿತ್ತಾರಿ, ಪುಲ್ಲೂರು-ಪೆರಿಯ ಎಂಬ ಹಾಲು ಉತ್ಪಾದಕರ ಸಂಘಗಳು ಈ ಪಂಚಾಯತ್ ನಲ್ಲಿ ಸಕ್ರಿಯವಾಗಿವೆ. ಈ ಮೂರು ಸಂಘಗಳ ಮೂಲಕ ಸಂಘ್ರಹಿಸಲಾಗುವ ಹಾಲಿನ ಅಳತೆ ಈ ಹಿಂದಿನ ವರ್ಷಗಳಿಗಿಂತ ಶೇ 20 ಅಧಿಕಗೊಂಡಿದೆ.
ಹಾಲು ಉತ್ಪಾದನೆಯಲ್ಲಿ ಸ್ವಾವಲಂಬಿತನ, ಹಾಲು ಸಹಕಾರಿ ಸಂಸ್ಥೆಗಳ ಪ್ರಬಲೀಕರಣ, ಹಾಲು ಉತ್ಪಾದಕರ ಆದಾಯ ಹೆಚ್ಚಳ, ಅವರ ಬದುಕಿನ ಮಟ್ಟ ಹೆಚ್ಚಳ ಇತ್ಯಾದಿ ಉದ್ದೇಶಗಳೊಂದಿಗೆ "ಕ್ಷೀರಗ್ರಾಮ" ಯೋಜನೆ ಜಾರಿಗೊಳ್ಳುತ್ತಿದೆ.