ಕೊಚ್ಚಿ: ಶಾಲಾರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಪ್ರಯಾಣ ದರ ರೂ.5 ಮತ್ತು ಪ್ರಯಾಣಿಕರ ಕನಿಷ್ಠ ಪ್ರಯಾಣ ಶುಲ್ಕ ರೂ.10 ಕ್ಕೆ ನಿಗದಿಪಡಿಸಬೇಕೆಂದು ಖಾಸಗೀ ಬಸ್ ಮಾಲಕರ ಸಂಘ ಒತ್ತಾಯಿಸಿದೆ. ನ್ಯಾಯಮೂರ್ತಿ ಶ್ರಮಚಂದ್ರನ್ ಸಮಿತಿಯಿಂದ ಶಿಫಾರಸು ಮಾಡಲಾದ ದರ ಹೆಚ್ಚಳ ಮಾಡಿದರಷ್ಟೇ ಬಸ್ ಉದ್ಯಮ ಉಳಿಯಲು ಸಾಧ್ಯ. ವಸ್ತುಸ್ಥಿತಿ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅರಿವಿದ್ದರೂ ಇದೀಗ ಅಗತ್ಯದ ನಿರ್ಣಯ ಕೈಗೊಳ್ಳದಿರುವುದು ಖೇದಕರ ಎಂದು ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿ ಲೋರೆನ್ಸ್ ಬಾಬು ಹೇಳಿರುವÀರು.
2021 ಜುಲೈ 1 ರಿಂದ ಸೆಪ್ಟೆಂಬರ್ 30 ರವರೆಗಿನ ಸ್ಟೇಜ್ ಹಂತದ ರಸ್ತೆ ತೆರಿಗೆ ವಿನಾಯ್ತಿ ನೀಡಬೇಕು ಮೊದಲಾದ ಬೇಡಿಕೆಗಳನ್ನು ಬಸ್ ಮಾಲಕರು ಮುಂದಿರಿಸಿರುವರು. ವಿದ್ಯಾರ್ಥಿಗಳಿಗೆ ಈಗಿರುವ ಕನಿಷ್ಠ ದರ 5 ರೂ.ಗಳನ್ನು ಪಡೆದುಕೊಂಡರೆ, ಕನಿಷ್ಠ ನೂರು ವಿದ್ಯಾರ್ಥಿಗಳು ಪ್ರಯಾಣಿಸಿದರೆ ಮಾತ್ರ 1 ಲೀಟರ್ ಡೀಸೆಲ್ ಖರ್ಚು ಸರಿದೂಗಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ಬಸ್ ಸೇವೆ ಒದಗಿಸಲು ಸಾಧ್ಯವಿಲ್ಲ. ಕೋವಿಡ್ ವಿನಾಯ್ತಿಗಳ ಬಳಿಕ ಇದೀಗ ಬಸ್ ಸಂಚಾರ ನಡೆಸಲಾಗುತ್ತಿದ್ದರೂ ಪ್ರಯಾಣಿಕರ ಸಂಖ್ಯೆಲ್ಲಿ ಗಣನೀಯ ಕುಸಿತವಾಗಿದೆ. ಆರ್ಥಿಕ ಸಂಖಷ್ಟವನ್ನು ಗಮನದಲ್ಲಿರಿಸಿ ಹಣಕಾಸಿನ ಬಿಕ್ಕಟ್ಟು ಮತ್ತು ಆ ಬೇಡಿಕೆಗಳು ಈ ವಾರ ಮುಖ್ಯಮಂತ್ರಿಯ ಚರ್ಚೆಗೆ ಸಲ್ಲಿಸಲಾಗಿದೆ. ಈ ವಾರ ಈ ಬಗ್ಗೆ ಚರ್ಚೆಗಳು ನಡೆಯುವ ಸಾಧ್ಯತೆಗಳಿವೆ ಎಂದು ನಿರೀಕ್ಷಿಸಲಾಗಿದೆ. ಶಾಲಾರಂಭದ ಮುನ್ನವೇ ಈ ಮನವಿಗಳನ್ನು ಸರ್ಕಾರ ಪರಿಹರಿಸಬೇಕು ಎಂದು ಬಸ್ ಮಾಲಕರ ಸಂಘ ವಿನಂತಿಸಿದೆ.