ಮುಂಬೈ: ಮುಂಬೈ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಮಾದಕವಸ್ತುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಅಕ್ಟೋಬರ್ 7ರ ವರೆಗೆ ಎನ್ ಸಿಬಿ ವಶಕ್ಕೆ ನೀಡಲಾಗಿದೆ.
ಡ್ರಗ್ಸ್ ಪ್ರಕರಣ ಸಂಬಂಧ ಬಂಧಿತ ಎಲ್ಲಾ ಎಂಟು ಆರೋಪಿಗಳ ವೈದ್ಯಕೀಯ ಪರೀಕ್ಷೆಯ ನಂತರ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಆರೋಪಿಗಳ ವಿಚಾರಣೆ ನಡೆಸಿದ ಕೋರ್ಟ್, ಹೆಚ್ಚಿನ ವಿಚಾರಣೆಗಾಗಿ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮೇಚಾ ಅವರನ್ನು ಅಕ್ಟೋಬರ್ 7ರ ವರೆಗೆ ಎನ್ ಸಿಬಿ ವಶಕ್ಕೆ ನೀಡಿದೆ.
ಶಾರುಖ್ ಪುತ್ರ ಆರ್ಯನ್ ಅವರ ಫೋನಿನಲ್ಲಿ 'ಆಘಾತಕಾರಿ, ದೋಷಾರೋಪಣೆ ಮಾಡುವ ವಸ್ತು' ಪತ್ತೆಯಾಗಿದೆ. ಹೆಚ್ಚಿನ ವಿಚಾರಣೆಗಾಗಿ ಆರ್ಯನ್ ಅವರನ್ನು ಅಕ್ಟೋಬರ್ 11 ರವರೆಗೆ ತಮ್ಮ ವಶಕ್ಕೆ ನೀಡುವಂತೆ ಎನ್ ಸಿಬಿ ಮನವಿ ಮಾಡಿತ್ತು.
ಎನ್ ಸಿಬಿ ನಡೆಸಿದ ಪ್ರಾಥಮಿಕ ತನಿಖೆಯು ಆರ್ಯನ್ ಮೊಬೈಲ್ ನಲ್ಲಿ ವಾಟ್ಸಾಪ್ ಚಾಟ್‌ಗಳ ರೂಪದಲ್ಲಿ ದೋಷಪೂರಿತ ವಸ್ತುಗಳನ್ನು ಹೊಂದಿದೆ ಎಂದು ಬಹಿರಂಗಪಡಿಸುತ್ತದೆ ಮತ್ತು ಹೀಗೆ ಬಂಧಿತ ಆರೋಪಿಗಳೊಂದಿಗೆ (ಆರ್ಯನ್ ಖಾನ್ ಮತ್ತು ಇನ್ನಿಬ್ಬರು) ನಿಯಮಿತವಾಗಿ ಪೂರೈಕೆದಾರರು ಮತ್ತು ಪೆಡ್ಲರ್‌ಗಳೊಂದಿಗಿನ ನಂಟನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ" ಎಂದು ಎನ್ ಸಿಬಿ ತನ್ನ ರಿಮಾಂಡ್ ನೋಟ್ ನಲ್ಲಿ ಹೇಳಿದೆ.
ಅಕ್ಬೋಬರ್ 2ರಂದು ರಾತ್ರಿ ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು. ಪಾರ್ಟಿಯಲ್ಲಿ ಭಾಗವಹಿಸಿದ್ದ ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಎಂಟು ಮಂದಿಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.