ಮಂಜೇಶ್ವರ: ಕೇರಳ ತುಳು ಅಕಾಡೆಮಿ ನಿರ್ವಹಣೆ, ಮುಂದಿನ ಚಟುವಟಿಕೆಗಳಿಗಾಗಿ 70 ಲಕ್ಷ ರೂ.ಗಳನ್ನು ಸರ್ಕಾರ ಮಂಜೂರು ಮಾಡುವುದಾಗಿ ಸಾಂಸ್ಕøತಿಕ ಇಲಾಖೆ ಸಚಿವ ಸಜಿ ಚೆರಿಯನ್ ತಿಳಿಸಿದ್ದಾರೆ.
ಹೊಸಂಗಡಿ ಅಂಗಡಿಪದವಿನಲ್ಲಿ ಕಾರ್ಯಾಚರಿಸುತ್ತಿರುವ ಕೇರಳ ತುಳು ಅಕಾಡೆಮಿ ಕಟ್ಟಡ ತುಳು ಭವನದ ನಿರ್ಮಾಣ ಈಗಾಗಲೇ ಪೂರ್ಣಗೊಂಡು ಲೋಕಾರ್ಪಣೆಗೊಂಡು ಕಾರ್ಯನಿರ್ವಹಿಸುತ್ತಿದೆ. ಆದರೆ ತುಳು ಭವನದ ದ್ವಿತೀಯ ಹಂತದ ನಿರ್ಮಾಣ ಚಟುವಟಿಕೆಗಳು, ಅಕಾಡೆಮಿ ಚಟುವಟಿಕೆ ವೆಚ್ಚಗಳಿಗೆ ತುರ್ತು ನಿಧಿಯ ಅಗತ್ಯವಿತ್ತು. ತುಳು ಭವನದ ಸುತ್ತುಗೋಡೆ ನಿರ್ಮಾಣ ಆರಂಭಿಕ ಹಂತದಲ್ಲಿದ್ದು, ಶೀಘ್ರ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಇದೆ. ತುಳು ಪ್ರಾಚೀನ ಗ್ರಂಥಗಳ ಸಂಗ್ರಹ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ತುಳು ಲಿಪಿ ಕಲಿಕೆ, ತೌಳವ ಜಾನಪದ ಕಲೆಗಳ ಪ್ರಾತ್ಯಕ್ಷಿಕೆ, ತರಬೇತಿ ಮೊದಲಾದ ಯೋಜನೆಗಳು ಅಕಾಡೆಮಿಯ ಕನಸಿನ ಯೋಜನೆಯಾಗಿದ್ದು, ನಿರ್ವಹಣೆಗೆ ನಿಧಿಯ ಬೇಡಿಕೆಯನ್ನು ಸಕಾರ್|ರಕ್ಕೆ ಯೋಜನಾ ರೂಪದಲ್ಲಿ ಸಲ್ಲಿಸಲಾಗಿತ್ತು. ಈ ಬಗ್ಗೆ ಉದುಮ ಶಾಸಕ ನ್ಯಾಯವಾದಿ ಸಿ.ಎಚ್.ಕುಂಞಂಬು ಅವರ ನೇತೃತ್ವದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ ಸಾಲ್ಯಾನ್ ಸಚಿವರಿಗೆ ತಿರುವನಂತಪುರದಲ್ಲಿ ಮಂಗಳವಾರ ಮನವಿ ಸಲ್ಲಿಸಿದರು. ಈ ವೇಳೆ ಸಚಿವರು ಈ ಬಗ್ಗೆ ನಿಧಿ ಒದಗಿಸುವ ಭರವಸೆ ನೀಡಿದ್ದಾರೆ.